ಪಿರಿಯಾಪಟ್ಟಣದ ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಪಿರಿಯಾಪಟ್ಟಣ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಜವಾಬ್ದಾರಿಯುತ ಕೆಲಸವಾಗಿದ್ದು ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಸೂಚಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಪಟ್ಟಣದ ದೇವರಾಜ ಅರಸು ಭವನದಲ್ಲಿ ಇತ್ತೀಚಿಗೆ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಿರಿಯಾಪಟ್ಟಣ ವಿಧಾನಸಭಾಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಂಬರುವ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಸ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ಹಾಗೂ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಕ್ಷೇತ್ರ ವ್ಯಾಪ್ತಿಯ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕ್ಷೇತ್ರದಲ್ಲಿ ಯಾವುದೇ ಒಬ್ಬ ನಾಗರಿಕ ಮತದಾನದಿಂದ ವಂಚಿತರಾಗಬಾರದು. 18 ವರ್ಷ ತುಂಬಿದ ಯುವ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಮತಗಟ್ಟೆ ಅಧಿಕಾರಿಗಳು ತಮಗೆ ನಿಗಧಿಪಡಿಸಿದ ಮತಗಟ್ಟೆ ವ್ಯಾಪ್ತಿಯಲ್ಲಿನ ಪ್ರತಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ತರಬೇತಿಯ ಪ್ರಮುಖ ಅಂಶಗಳು: ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಫಾರ್ಮ್-6 ಅನ್ನು ಸರಿಯಾಗಿ ಭರ್ತಿ ಮಾಡಿಕೊಳ್ಳುವುದು. ಹೆಸರು, ಭಾವಚಿತ್ರ, ವಯಸ್ಸು ಅಥವಾ ವಿಳಾಸದಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಫಾರಂ-8 ಬಳಕೆ. ಕ್ಷೇತ್ರದಲ್ಲಿ ಮರಣ ಹೊಂದಿದವರು ಅಥವಾ ಕಾಯಂ ಆಗಿ ಬೇರೆಡೆಗೆ ಸ್ಥಳಾಂತರಗೊಂಡವರ ಹೆಸರನ್ನು ನಿಯಮಾನುಸಾರ ಪಟ್ಟಿಯಿಂದ ತೆಗೆದುಹಾಕಲು ಕೈಗೊಳ್ಳಬೇಕಾದ ಕ್ರಮಗಳು.
ಬಿ.ಎಲ್.ಒ ಆ್ಯಪ್ ಮೂಲಕ ಡಿಜಿಟಲ್ ರೂಪದಲ್ಲಿ ದತ್ತಾಂಶಗಳನ್ನು ಅತ್ಯಂತ ನಿಖರವಾಗಿ ಅಪ್‌ಲೋಡ್ ಮಾಡುವ ಕುರಿತು ಪ್ರಾತ್ಯಕ್ಷಿಕೆ. ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ವಿನೋದ್ ಇತರರಿದ್ದರು.