ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  
ಮೈಸೂರು

ಸಿಎಂ ಬದಲಾವಣೆ ಆಗಬಹುದು: ಬಿ.ವೈ.ವಿಜಯೇಂದ್ರ ಭವಿಷ್ಯ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಮೇ 15ಕ್ಕೆ ಡಿ.ಕೆ.ಶಿವಕುಮಾರ್ ಸಿಎಂ ಸಾಧ್ಯತೆ
  • ಮಾದಕ ವಸ್ತುಗಳು ವಿಷಯದಲ್ಲಿ ಕರ್ನಾಟಕ ಕೂಡ ‘ಉಡ್ತಾ ಪಂಜಾಬ್’ ಆಗಿದೆ.
ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಬಹುದು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಗಮಸಿದರೆ ಸಿಎಂ ಬದಲಾವಣೆ ವಿಷಯ ತೀರ್ಮಾನ ನಡೆಯುತ್ತಿದೆ ಎಂದು ಅನಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಕೂಡ ಅವಕಾಶ ಸಿಗುತ್ತಾ ಎಂದು ನೋಡ್ತಿದ್ದಾರೆ. ಅವರು ಕೂಡ ಸಿಎಂ ಆಗಲಿ ಎಂದು ಕೆಲವೊಬ್ಬರು ಹೇಳುತ್ತಿದ್ದಾರೆ. ಮೇ 15ಕ್ಕೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದು ಕೆಲವರು ಹೇಳಿದ್ದಾರೆ ಎಂದರು.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬೆಂಬಲಿಗರು ಹೊಸದಿಲ್ಲಿಯಲ್ಲಿ ಕುಳಿತು ಲಾಬಿ ಮಾಡುತ್ತಿದ್ದಾರೆ. ಇವರಿಬ್ಬರ ಕಿತ್ತಾಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮತ್ತಿತರ ನಾಯಕರು ಟವೆಲ್ ಹಾಸಿದ್ದಾರೆ. ಈ ಹಿನ್ನೆಲೆಯಲ್ಲಿ ಏನಾಗುತ್ತದೆಯೋ ನೋಡೋಣ ಎಂದು ವ್ಯಂಗ್ಯವಾಡಿದರು. 

 ‘ಉಡ್ತಾ ಪಂಜಾಬ್’ ಆಗಿದೆ 

ಮಾದಕ ವಸ್ತುಗಳು ವಿಷಯದಲ್ಲಿ ಕರ್ನಾಟಕ ಕೂಡ ‘ಉಡ್ತಾ ಪಂಜಾಬ್’ ಆಗಿದೆ. ಮೈಸೂರಿನಲ್ಲೇ ನೋಡಿ ಏನಾಗ್ತಿದೆ. ಈ ನಗರದಲ್ಲಿ ಡ್ರಗ್ಸ್ ಹಾವಳಿ ಜಾಸ್ತಿಯಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಮನುಷ್ಯತ್ವ ಇಲ್ಲದ ಸರ್ಕಾರವಾಗಿದೆ. ಮೈಸೂರಿನಲ್ಲಿ 3 ವರ್ಷದಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ಆಗಿಲ್ಲ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಮನಸ್ಸು ಮಾಡಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೇವಲ ಕುರ್ಚಿ ಉಳಿಸಿಕೊಳ್ಳುವ ಹಪಾಹಪಿಯಷ್ಟೇ ಕಾಣಿಸುತ್ತಿದೆ. ದೆಹಲಿಗೆ ಒಬ್ಬರ ಹಿಂದೆ ಒಬ್ಬರು ಹೋಗ್ತಿದ್ದಾರೆ ಎಂದು ಟೀಕಿಸಿದರು.
ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇಲ್ಲ ಎಂದು ಕಾಂಗ್ರೆಸ್ ಮುಖಂಡರೇ ನನಗೆ ಹೇಳಿದ್ದಾರೆ. ಫಲಿತಾಂಶ ಬಂದ ಮೇಲೆ ರಾಜ್ಯದ ಸಿಎಂ ಹಾಗೂ ಕಾಂಗ್ರೆಸ್‌ಗೆ ಪಾಠವಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಮೇ 9ಕ್ಕೆ ಬಿಎಸ್‌ವೈ ಅಭಿಮಾನೋತ್ಸವ 

ಜನಸೇವೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಾರ್ಥಕ 50 ವರುಷ ಪೂರೈಸಿದ್ದು, ಇದಕ್ಕಾಗಿ ಮೇ 9ರಂದು ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತೂರು ಮಠದ ಸ್ವಾಮೀಜಿಯನ್ನು ಭೇಟಿ ಮಾಡಿ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು, ಕಾರ್ಯಕ್ರಮಕ್ಕೆ ಬರಲು ಸ್ವಾಮೀಜಿ ಒಪ್ಪಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ಮೇ 8ರಂದು ಯಡಿಯೂರಪ್ಪ ಚಿತ್ರದುರ್ಗದ ಪುರ ಪ್ರವೇಶ ಮಾಡಲಿದ್ದಾರೆ. ಅಂದು ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗುತ್ತದೆ. ಮೇ 9ರಂದು ಕೇಂದ್ರ ಸಚಿವ ಅಮಿತ್ ಷಾ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ನಾಡಿನ ರೈತರು, ಮಹಿಳೆಯರು, ಸ್ವಾಮೀಜಿಗಳು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
 10 ಲಕ್ಷ ಜನ ಸೇರುವ ಐತಿಹಾಸಿಕ ಕಾರ್ಯಕ್ರಮ ಇದಾಗಲಿದೆ. ಈ ಕಾರ್ಯಕ್ರಮಕ್ಕಾಗಿ ಯಡಿಯೂರಪ್ಪನವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಿನಿ ದಸರಾ ಮಾದರಿಯಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ  ಎಂದು ತಿಳಿಸಿದರು. 
ಇದು ವಿಜಯೇಂದ್ರರಿಗೆ ಬೂಸ್ಟ್ ನೀಡಲಿರುವ ಕಾರ್ಯಕ್ರಮವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಸಮೀಪದಲ್ಲಿದ್ದಾಗ ಕಾರ್ಯಕ್ರಮ ಆಯೋಜನೆ ಮಾಡಿದ್ದರೆ ವಿಜಯೇಂದ್ರ ಅಥವಾ ಬಿಜೆಪಿಗೆ ಬೂಸ್ಟ್ ಆಗೋದು. ಈಗ ಯಾವುದೇ ಚುನಾವಣೆ ಇಲ್ಲ. 
ಇದು ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ. ಈ ರಾಜ್ಯದಲ್ಲಿ ಅನೇಕರು ಅದೃಷ್ಟದ ಸಿಎಂ ಆಗಿದ್ದಾರೆ. ಆದರೆ ಯಡಿಯೂರಪ್ಪ ಅದೃಷ್ಟದ ಸಿಎಂ ಅಲ್ಲ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇದ್ದವರು. ಅದಕ್ಕಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.