ಕುಡಿಯುವ ನೀರು, ಕೃಷಿ ಬಿತ್ತನೆಯ ಕುರಿತು ನಗರದಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನಗರದಲ್ಲಿ ಭಾನುವಾರ ಸಂಜೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತನ್ವೀರ್ ಸೇಠ್, ಜಿ.ಲಕ್ಷ್ಮೀಕಾಂತ್ ರೆಡ್ಡಿ, ಶ್ರೀರೂಪ ಇನ್ನಿತರರಿದ್ದರು
- ಪರ್ಯಾಯ ಬೆಳೆ ಬೆಳೆಯಲು ರೈತರನ್ನು ಸಜ್ಜುಗೊಳಿಸಿ
- ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚನೆ
- ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ
- ಕುಡಿಯುವ ನೀರು ಹಾಗೂ ಮುಂಗಾರು ಬಿತ್ತನೆಯ ಕುರಿತು ಚರ್ಚೆ
ಮೈಸೂರು: ಮಳೆ ಕೊರತೆಯಿಂದಾಗಿ ಬರಗಾಲದ ಪರಿಸ್ಥಿತಿ ತಲೆದೋರುವ ಸಾಧ್ಯ ಇದ್ದು, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜತೆಗೆ, ಪರ್ಯಾಯ ಕೃಷಿ ಬೆಳೆ ಬೆಳೆಯಲು ರೈತರನ್ನು ಸಜ್ಜುಗೊಳಿಸಬೇಕು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.
ಕುಡಿಯುವ ನೀರು ಹಾಗೂ ಮುಂಗಾರು ಬಿತ್ತನೆಯ ಕುರಿತು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮೈಸೂರು ಜಿಲ್ಲೆಯಲ್ಲಿ ಶೇ.40ರಷ್ಟು, ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಶೇ.13ರಷ್ಟು ಮಳೆ ಕೊರತೆಯಾಗಿದ್ದು, ಒಂದು ವಾರದಲ್ಲಿ ಮಳೆ ಬರದಿದ್ದರೆ ಇಳುವರಿ ಕುಸಿಯಲಿದೆ. ಶೇ.20ರಿಂದ 30ರಷ್ಟು ಬೆಳೆ ನಷ್ಟವಾಗಲಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಕಾರಣಕ್ಕೂ ಉಭಯ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು. ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಅಧಿಕಾರಿಗಳು ಸಮರೋಪಾದಿಯಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಹಣಕಾಸಿನ ಸಮಸ್ಯೆ ಇಲ್ಲ. ಜನರಿಗೆ ನೀರು ಒದಗಿಸಲು ಮೊದಲ ಆದ್ಯತೆ ಹೊಸದಾಗಿ ಕೊಳವೆಬಾವಿ ಕೊರೆಸುವುದಾಗಲಿ. ಬಳಿಕ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಿ ಎಂದು ತಿಳಿಸಿದರು.
ಕೊಳವೆಬಾವಿ ಕೊರೆಸಿದ ತಕ್ಷಣ ಕೆಲಸ ಮುಗಿಯಲ್ಲ. ಅದಕ್ಕೆ ಪೈಪ್‌ಲೈನ್ ಹಾಕಿ, ವಿದ್ಯುತ್ ಸಂಪರ್ಕ ಕೊಡಿಸಿ ಜನರಿಗೆ ನೀರು ಕೊಡಿಸಿದಾಗಲೇ ಕೆಲಸ ಪೂರ್ಣಗೊಂಡಂತಾಗಲಿದೆ. ಬರೀ ಅಂಕಿ-ಅಂಶಗಳಿಂದ ಏನು ಪ್ರಯೋಜನವಾಗಲ್ಲ ಎಂದು ಅಸಮರ್ಪಕ ಮಾಹಿತಿ ನೀಡಿದ ಅಧಿಕಾರಿಯ ವಿರುದ್ಧ ಗುಡುಗಿದರು.
ಬರಗಾಲದ ಸಂದರ್ಭದಲ್ಲೇ ಕಲುಷಿತ ನೀರು ಪೂರೈಕೆಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ನಿಯಮಿತವಾಗಿ ನೀರಿನ ಪರೀಕ್ಷೆ ಮಾಡಿ ಬಳಿಕವೇ ಜನರಿಗೆ ಸರಬರಾಜು ಮಾಡಬೇಕು ಎಂದೂ ತಾಕಿತ್ತು ನೀಡಿದರು.
ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಭಾಗದಲ್ಲಿ ಬೆಳೆದಿರುವ ಮುಸುಗಿನ ಜೋಳದ ಬೆಳೆಯಲ್ಲಿ ಬಿಳಿಸುಳಿ ರೋಗ ಕಂಡುಬಂದಿದ್ದು, ಇದಕ್ಕೆ ನೀಡಬೇಕಿರುವ ಔಷಧೋಪಚಾರ, ಹತೋಟಿಯ ಕ್ರಮಗಳ ಕುರಿತು ಕೃಷಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ನಗರ ಪಟ್ಟಣ ಪ್ರದೇಶಗಳಿಗೆ ನೀರು ಪೂರೈಕೆಗಾಗಿ ಅಮೃತ್ 2 ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರಿಗೆ ನೀರೊದಗಿಸಬೇಕು ಎಂದು ತಿಳಿಸಿದರು.
ಹನೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶದಲ್ಲಿರುವ ಜನ ವಸತಿ ಕಡೆಯೂ ಹೆಚ್ಚಿನ ತೊಂದರೆ ಇದೆ. ಜನರಿಗೆ ಶುದ್ಧ ನೀರು ಒದಗಿಸಬೇಕಿದೆ. ನೀರು ಸರಬರಾಜು ಮಾಡುವ ಮೊದಲು ಶುದ್ಧತೆ ಪರೀಕ್ಷೆ ಆಗಬೇಕು ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್ ತಿಳಿಸಿದರು.
ಕುಡಿಯುವ ನೀರಿನ ಕೊರತೆ ಉಂಟಾದ ಸಂದರ್ಭದಲ್ಲಿ ಬೋರ್‌ವೆಲ್ ಕೊರೆಯಲಾಗುತ್ತದೆ. ಅವುಗಳಿಗೆ ಸೆಸ್ಕ್ ವತಿಯಿಂದ ವಿದ್ಯುತ್ ಸಂಪರ್ಕ ನೀಡುವ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಬರ ಘೋಷಣೆಯಾದ ನಂತರ ಮಾತ್ರ ಕುಡಿಯುವ ನೀರು ಪೂರೈಕೆಗೆ ಎನ್‌ಡಿಆರ್‌ಎಫ್‌ನಲ್ಲಿ ನೀಡುವ ಅನುದಾನ ಬಳಸಬಹುದು. ಬರ ಘೋಷಣೆಯಾಗದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶಾಸಕರಾದ ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಗಣೇಶ್‌ಪ್ರಸಾದ್, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾರೋಥ್, ಎಸ್‌ಪಿ ಮುತ್ತುರಾಜ್, ಮೈಸೂರು ಜಿಪಂ ಸಿಇಒ ಯುಕೇಶ್‌ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಾರ್ಡ್‌ವಾರು ಸಮಸ್ಯೆಗಳ ಪಟ್ಟಿ ಮಾಡಿ
ಮೈಸೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಾರ್ಡ್‌ವಾರು ಇರುವ ಸಮಸ್ಯೆಗಳನ್ನು ಮಹಾನಗರ ಪಾಲಿಕೆ ವತಿಯಿಂದ ಪಟ್ಟಿ ಮಾಡಿ ಒದಗಿಸಬೇಕು. ಆಗ ಮಾತ್ರ ಸಮಸ್ಯೆಗಳನ್ನು ವಿಸ್ತಾರವಾಗಿ ಚರ್ಚಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಯತೀಂದ್ರ ತಿಳಿಸಿದರು.
ಮಾಹಿತಿ ಕೊಡಲು ಏನು ಸಮಸ್ಯೆ?
ಮೈಸೂರು ನಗರದ ಕುರಿತು ಒಂದೇ ಪುಟದಲ್ಲಿ ಮಾಹಿತಿ ಕೊಟ್ಟರೆ ಏನು ಗೊತ್ತಾಗುತ್ತದೆ? ಪೂರ್ಣ ಮಾಹಿತಿ ಕೊಡಲು ಏನು ಸಮಸ್ಯೆ? ಎಂದು ಸಚಿವ ಯತೀಂದ್ರ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೆ.ಹರೀಶ್‌ಗೌಡ, ಮೈಸೂರು ನಗರ ವ್ಯಾಪ್ತಿ ಚಾಮರಾಜ, ಕೆ.ಆರ್., ಎನ್.ಆರ್., ಚಾಮುಂಡೇಶ್ವರಿ ಕ್ಷೇತ್ರದ ಮಾಹಿತಿ ಇಲ್ಲದ ಕಾರಣಕ್ಕೆ ಗರಂಆಗಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಗ್ರಾಮಾಂತರ ಮತ್ತು ಮೈಸೂರು ನಗರದ ಕುರಿತು ಪ್ರತ್ಯೇಕ ಮಾಹಿತಿ, ಪ್ರತ್ಯೇಕ ಸಭೆ ನಡೆಸಿ ಎಂದು ಸೂಚಿಸಿದರು.
"
ಕಬಿನಿ ಜಲಾಶಯದಲ್ಲಿ ಮೂರುವರೆ ತಿಂಗಳಿಗೆ ಸಾಕಾಗುವಷ್ಟು ನೀರು ಸಂಗ್ರಹ ಇದೆ. ಜನರ ಕುಡಿಯುವ ಉದ್ದೇಶಕ್ಕೆ ಬಿಟ್ಟು ಕೃಷಿ ಬೆಳೆಗೆ ನೀರು ಕೊಡಲು ಸಾಧ್ಯವೇ ಇಲ್ಲ.
— ರಘುಪತಿ, ಅಧೀಕ್ಷಕ ಇಂಜಿನಿಯರ್, ನೀರಾವರಿ ಇಲಾಖೆ