ಲಿಂಗಾಂಬುದಿ ಪಾರ್ಕ್‌ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ವಿಧಿಸುವ ನಿರ್ಧಾರವನ್ನು ವಿರೋಧಿಸಿ ವಾಯುವಿಹಾರಿಗಳು, ಸ್ಥಳೀಯ ನಿವಾಸಿಗಳು, ಲಿಂಗಾಂಬುಧಿ ಮಿತ್ರರ ಬಳಗ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್(ಎಐಡಿವೈಒ)ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
- ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್ ಪ್ರತಿಭಟನೆ
ಲಿಂಗಾಂಬುದಿ ಪಾರ್ಕ್‌ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ವಿಧಿಸುವ ನಿರ್ಧಾರ ವಿರೋಧಿಸಿ ವಾಯುವಿಹಾರಿಗಳು, ಸ್ಥಳೀಯ ನಿವಾಸಿಗಳು, ಲಿಂಗಾಂಬುದಿ ಮಿತ್ರರ ಬಳಗ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್(ಎಐಡಿವೈಒ)ಕಾರ್ಯಕರ್ತರು ಭಾನುವಾರ ಕೆರೆ ಬಳಿ ಪ್ರತಿಭಟನೆ ನಡೆಸಿದರು.
ಲಿಂಗಾಂಬುದಿ ಕೆರೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನೂರಾರು ಜನರು ವಾಕಿಂಗ್, ರನ್ನಿಂಗ್ ಹಾಗೂ ವ್ಯಾಯಾಮಕ್ಕಾಗಿ ಆಗಮಿಸುತ್ತಾರೆ. ಅದರಲ್ಲೂ ಹಿರಿಯ ನಾಗರಿಕರು ಹಾಗೂ ಆರೋಗ್ಯದ ದೃಷ್ಟಿಯಿಂದ ನಿಯಮಿತವಾಗಿ ವಾಯುವಿಹಾರ ಮಾಡುವವರ ಸಂಖ್ಯೆ ಹೆಚ್ಚಿದೆ. ಇದೀಗ ಪ್ರತಿದಿನ ಪ್ರವೇಶ ಶುಲ್ಕ ಪಾವತಿಸಬೇಕಾಗಿರುವುದು ವಾಯುವಿಹಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ನಗರದ ಮಧ್ಯೆ ಇರುವ ಹಸಿರು ಪ್ರದೇಶದಲ್ಲಿ ಆರೋಗ್ಯಕ್ಕಾಗಿ ವಾಕಿಂಗ್ ಮಾಡಲು ಬರುವವರಿಂದಲೂ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ. ಸ್ವಚ್ಛ ಗಾಳಿ ಸೇವನೆಗೂ ದುಡ್ಡು ಕೊಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಂಬುದಿ ಮಿತ್ರರ ಬಳಗದ ಅಧ್ಯಕ್ಷ ನಾಗೇಶ್ ಮಾತನಾಡಿ, ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಿಗಳಿಗೆ ಮಾತ್ರ ಶುಲ್ಕದಿಂದ ವಿನಾಯಿತಿ ನೀಡಿ, ಉಳಿದವರಿಂದ ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ಶುಲ್ಕ ವಸೂಲಿ ಮಾಡುವ ನಿರ್ಧಾರವನ್ನು ಸಾರ್ವಜನಿಕರು ವಿರೋಧಿಸಿದ್ದಾರೆ. ಅರಣ್ಯ ಇಲಾಖೆಯ ಈ ಕ್ರಮ ಖಂಡನೀಯ ಎಂದರು.
ಪ್ರವೇಶ ಶುಲ್ಕದ ನಿರ್ಧಾರವನ್ನು ಹಿಂಪಡೆಯದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದ ಅವರು ಎಚ್ಚರಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಿಗಳಿಗೆ ಪ್ರವೇಶ ಶುಲ್ಕವನ್ನು ಈಗಾಗಲೇ ಕೈಬಿಡಲಾಗಿದೆ. ಉಳಿದ ಸಾರ್ವಜನಿಕರಿಗೆ ಬೆಳಗ್ಗೆ 7ರಿಂದ 10.30ರವರೆಗೆ ಹಾಗೂ ಸಂಜೆ 4ರಿಂದ 7ರವರೆಗೆ ಶುಲ್ಕ ವಿನಾಯಿತಿ ನೀಡುವ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪಿ.ಸಂಧ್ಯಾ, ಟಿ.ಆರ್.ಸುನಿಲ್, ರಂಜಿತ್, ಪೂರ್ಣಿಮಾ, ಶಿವಕುಮಾರ್, ಅವಿನಾಶ್, ರಾಜಣ್ಣ ಸೇರಿದಂತೆ 300ಕ್ಕೂ ಹೆಚ್ಚು ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಿಗಳು ಪಾಲ್ಗೊಂಡಿದ್ದರು.