ಸರಗೂರು ತಾಲೂಕಿನ ಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ರೋಡ್ ಶೋ ನಡೆಸಿದರು. ಅಶ್ವಿನ್‌ಕುಮಾರ್, ಕೆ.ಎಂ.ಕೃಷ್ಣನಾಯಕ, ಜಿ.ಗೋಪಾಲಸ್ವಾಮಿ, ರಾಜೇಂದ್ರ, ಸುಧೀರ್‌ಇತರರಿದ್ದರು. 
ಮೈಸೂರು

ಸಫಾರಿ ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ
  • ಸರಗೂರು ಪಟ್ಟಣದಲ್ಲಿ ರೋಡ್‌ಶೋ
  • ಹುಲಿ ದಾಳಿಯಿಂದ ಮೃತಪಟ್ಟ ರೈತರ ಮನೆಗಳಿಗೆ ಭೇಟಿ, ಸಾಂತ್ವನ
ಸರಗೂರು: ರಾಜ್ಯ ಸರ್ಕಾರದ ತನ್ನ ವೈಫಲ್ಯಗಳನ್ನು ಇಟ್ಟುಕೊಂಡು ಸಫಾರಿಗಳನ್ನು ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣಕ್ಕೆ ಭಾನುವಾರ ಮುಖಂಡರೊಂದಿಗೆ ಆಗಮಿಸಿದ ಅವರು ರೋಡ್ ಶೋ ನಡೆಸಿ ನಂತರ ಹುಲಿ ದಾಳಿಯಿಂದ ಮೃತರಾದ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಮಾತನಾಡಿದರು.
ಕಾಂಗ್ರೆಸ್‌ನವರು ಆಡಳಿತ ಮಾಡ್ತಿದ್ದಾರೆ. ಆದರೆ ಇದು ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆಯಲ್ಲೇ ಹುಲಿ ದಾಳಿ ಆಗುತ್ತಿದೆ. ಹುಲಿ ದಾಳಿಯಿಂದ ಮೃತಪಟ್ಟವರ ದರ್ಶನಕ್ಕೂ ಬಾರದ ಸಚಿವರು ಮೈಸೂರಿಗೆ ಮೃತದೇಹವನ್ನು ಕರೆಸಿಕೊಂಡರು. ಮತ್ತೆ ಯಾವ ಪುರುಷಾರ್ಥಕ್ಕಾಗಿ ಅರಣ್ಯ ಸಚಿವರಾಗಿದ್ದಾರೆ ಎಂದು ಕಿಡಿಕಾರಿದರು.
ಸರಗೂರು ತಾಲೂಕಿನಲ್ಲಿ ಹುಲಿ ದಾಳಿಗೆ ಸಿಲುಕಿ ಹಲವಾರು ಕುಟುಂಬಗಳು ಬಲಿ ಪಶುಗಳಾಗಿವೆ. ಹುಲಿಗಳು ಕಾಡಿನಿಂದ ಗ್ರಾಮಗಳ ಕಡೆಗೆ ಬರುತ್ತಿರುವುದಕ್ಕೆ ಸರ್ಕಾರದ ಕಡೆಯಿಂದ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದಕ್ಕೆ ಉತ್ತರ ಬೇಕಿದೆ. ಹುಲಿಗೆ ಇದು ಕಾಡು ಅಥವಾ ಇದು ಗ್ರಾಮ ಅನ್ನೋದು ಗೊತ್ತಿರುವುದಿಲ್ಲ. ನಿತ್ಯ ಹೀಗೆ ಗ್ರಾಮಗಳತ್ತ ಬಂದರೆ ರೈತರು ಕೃಷಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಹುಲಿ ದಾಳಿ ಮುಂದಿಟ್ಟುಕೊಂಡು ಸಫಾರಿಯನ್ನು ಬಂದ್ ಮಾಡಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಕೊಡದೆ ಹೋದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದು ಹೇಗೆ ? ಸಫಾರಿ ನಿಲ್ಲಿಸುವುದರಿಂದ ಹುಲಿಗಳ ದಾಳಿ ಮಾಡಲ್ವಾ ಎಂದು ವ್ಯಂಗ್ಯವಾಡಿದರು.
ವನ್ಯಜೀವಿಗಳ ದಾಳಿಯಿಂದ ಮೃತರಾದ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರ ಯಾವುದೇ ಕಾರಣಕ್ಕೂ ಸಾಲುವುದಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ಹೇಳಿದ್ದಾರೆ. ಈ ಭಾಗದ ರೈತರ ಜತೆ ನಾವು ನಿಲ್ಲುತ್ತೇವೆ. ಮತ್ತೊಮ್ಮೆ ರೈತನ ನಾಯಕರಾದ ಕುಮಾರಣ್ಣ ಅವರು ಮುಖ್ಯಮಂತ್ರಿಯಾಗಿ ಬರಬೇಕು ಎಂದು ಪಣ ತೊಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಎಚ್.ಡಿ.ಕೋಟೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಅದನ್ನು ಹೋಗಲಾಡಿಸಿ ತಾಲೂಕಿನ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡಲು ನಾನು ನಿಮ್ಮ ಜತೆಯಲ್ಲಿ ಇರುತ್ತೇನೆ. ಇಲ್ಲಿನ ಶಾಸಕರು, ಸಂಸದರು ಮುಖ್ಯಮಂತ್ರಿ ಅವರಿಗೆ ತುಂಬಾ ಆಪ್ತರು. ಹುಲಿ ದಾಳಿ, ಅಭಿವೃದ್ಧಿ ವಿಚಾರವನ್ನು ಲಘುವಾಗಿ ತೆಗೆದುಕೊಂಡಿರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ಸಂಬಂದ ಮಾತನಾಡಿದ ಅವರು, ಇದು ನಮ್ಮ ವಿಪರ್ಯಾಸ. ಚರ್ಚೆ ಮಾಡಲು ಹಲವಾರು ವಿಚಾರಗಳಿದ್ದರೂ ಕುರ್ಚಿ ವಿಚಾರ ಬಹಳ ಚರ್ಚೆ ಆಗುತ್ತಿದೆ. ಈ ಸರ್ಕಾರ ಬಂದ ಮೇಲೆ ಶಿಕ್ಷಕರ ನೇಮಕಾತಿ ಆಗಿಲ್ಲ, ಕಾಂಗ್ರೆಸ್‌ನಲ್ಲಿ ಯಾರ ನಾಯಕತ್ವಕ್ಕೆ ಬೆಂಬಲ ಕೊಡಬೇಕು ಅನ್ನುವ ಗೊಂದಲವಿದೆ. ತುಂಗಭದ್ರಾ ಡ್ಯಾಮ್‌ನಲ್ಲಿ ಕ್ರಸ್ಟ್ ಗೇಟ್ ಕಿತ್ತು ಹೋಗಿದೆ. 52 ಕೋಟಿ ರೂ.ಗೆ ಟೆಂಡರ್ ಕರೆದರೂ ಗುಜರಾತ್ ಕಂಪನಿ ಬಂದು ಟೆಂಡರ್ ತಗೊಂಡ್ರು 11 ಕೋಟಿ ರೂ. ಕೆಲಸ ಆಗಿದೆ. ಆದರೆ ಬಿಲ್ ಬಿಡುಗಡೆ ಮಾಡಿಲ್ಲ, ಕರ್ನಾಟಕದಲ್ಲಿ ಜಾತಿಯನ್ನು ಮುಂದಿಟ್ಟುಕೊಂಡು ಅಧಿಕಾರ ಮಾಡಬಾರದು, ಕೇವಲ ತಾಲೂಕು ಕೇಂದ್ರವನ್ನ ಘೋಷಣೆ ಮಾಡೋದ್ರಿಂದ ತಾಲೂಕು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ತಾಲೂಕಿಗೆ ಸರಿಯಾದ ಕಟ್ಟಡಗಳು ಅಧಿಕಾರಿಗಳನ್ನು ನೇಮಿಸಿ ಕೆಲಸ ಕಾರ್ಯಗಳನ್ನು ಸಾರ್ವಜನಿಕರಿಗೆ ಒದಗಿಸಿ ಕೊಡುವುದು ಮುಖ್ಯ ಎಂದರು.
ರೋಡ್ ಶೋ ಮುನ್ನ ಪಡವಲು ವಿರಕ್ತ ಮಠ ಹಾಗೂ ಹಂಚೀಪುರ ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ನಂತರ ಹುಲಿ ದಾಳಿಗೆ ಮೃತಪಟ್ಟ ಮನೆಗಳಿಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್, ಮುಖಂಡ ಕೆ.ಎಂ.ಕೃಷ್ಣನಾಯಕ, ಪಕ್ಷದ ತಾಲೂಕು ಅಧ್ಯಕ್ಷರಾದ ಜಿ.ಗೋಪಾಲಸ್ವಾಮಿ, ರಾಜೇಂದ್ರ, ಒಕ್ಕಲಿಗ ಸಂಘದ ಅಧ್ಯಕ್ಷ ಸುಧೀರ್, ಹೂವಿನಕೊಳ ಮಹೇಂದ್ರ, ಎಚ್.ಹನು, ವಕೀಲ ಪ್ರಶಾಂತ್, ಬೆಟ್ಟನಾಯಕ, ವಾಲ್ಮೀಕಿ ಸಿದ್ದರಾಜು, ರಮೇಶ್, ಶಿವಕುಮಾರ್, ಶಿವರಾಜು, ಬಿ.ಜೆ.ಆಶೋಕ್ ಕುಮಾರ್, ಉದಯಕುಮಾರ್, ಪರಶಿವ, ಶಿವಲಿಂಗಯ್ಯ, ನಿಂಗರಾಜು, ಮುಖಂಡರು, ಕಾರ್ಯಕರ್ತರಿದ್ದರು.