- ರೈತರಿಗೆ ಆದಾಯ ತಂದುಕೊಡವ ನಿಟ್ಟಿನಲ್ಲಿ ಜಮೀನುಗಳ ಪಕ್ಕದಲ್ಲಿರುವ ಸರ್ಕಾರಿ ಜಾಗ, ರಸ್ತೆ ಬದಿಗಳಲ್ಲಿ ತೇಗ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಾಗುವುದು
- 25 ವರ್ಷಗಳ ಬಳಿಕ ಯಾರು ಮರ ನೋಡಿಕೊಂಡಿರುತ್ತಾರೆ ಅವರಿಗೆ ಶೇ.70ರಷ್ಟು ಹಾಗೂ ಸರ್ಕಾರಕ್ಕೆ ಶೇ.30ರಷ್ಟು ಆದಾಯವನ್ನು ಹಂಚಿಕೆ ಮಾಡಲಾಗುವುದು
ಮೈಸೂರು:ಮೂರು ಕೋಟಿ ತೇಗದ ಮರ ಬೆಳೆಸುವ ‘ತೇಗಸಿರಿ’ ಯೋಜನೆಗೆ ರಾಜ್ಯದಲ್ಲಿ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀಸುತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 111ನೇ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಗೆ ಆದಾಯ ತಂದುಕೊಡವ ನಿಟ್ಟಿನಲ್ಲಿ ಜಮೀನುಗಳ ಪಕ್ಕದಲ್ಲಿರುವ ಸರ್ಕಾರಿ ಜಾಗ, ರಸ್ತೆ ಬದಿಗಳಲ್ಲಿ ತೇಗ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಾಗುವುದು. ಮರಗಳನ್ನು ಬೆಳೆಸುವ ಜವಾಬ್ದಾರಿಯನ್ನು ರೈತರಿಗೆ ನೀಡಲಾಗುವುದು. ಅದು ಬೆಳೆದ 25 ವರ್ಷಗಳ ಬಳಿಕ ಯಾರು ಮರ ನೋಡಿಕೊಂಡಿರುತ್ತಾರೆ ಅವರಿಗೆ ಶೇ.70ರಷ್ಟು ಹಾಗೂ ಸರ್ಕಾರಕ್ಕೆ ಶೇ.30ರಷ್ಟು ಆದಾಯವನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಇದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ ತಲಾ ಒಂದೊಂದು ಕೋಟಿ ತೇಗದ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅಲ್ಲದೆ ಖಾಸಗಿಯವರಿಂದಲೂ ಗಿಡಗಳನ್ನು ಬೆಳೆಸಿ ರೈತರಿಗೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಐದು ಕೋಟಿ ಗಿಡಗಳನ್ನು ಬೆಳೆಸುವ ಕಾರ್ಯ ಮಾಡಿದ್ದರು. ಅದರಿಂದ ಪ್ರೇರೇಪಿತರಾಗಿ ಯಾವುದೋ ಗಿಡಗಳನ್ನು ಬೆಳೆಸುವ ಬದಲು, ರೈತರಿಗೂ ಆದಾಯ ತಂದುಕೊಡುವಂತಹ ತೇಗದ ಗಿಡಗಳನ್ನು ಬೆಳೆಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.
ಕೇಂದ್ರಕ್ಕೆ ವಿಸ್ತೃತ ವರದಿ ಸಲ್ಲಿಕೆ:
ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಸುಪ್ರಿಂಕೋರ್ಟ್ ಅನುಮತಿ ನೀಡಿರುವುದು ದೇಶಕ್ಕೆ ಮಾದರಿಯಾಗುವಂತಾಗಿದೆ. ಇದರಿಂದ ಯೋಜನೆ ನಿರ್ಮಾಣಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿದೆ ಎಂದರು.
ಈಗ ಯೋಜನೆಗೆ 5,400 ಹೆಕ್ಟೇರ್ ಭೂಮಿ ಬೇಕಿದೆ. ಅಲ್ಲದೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪರ್ಯಾಯವಾಗಿ ಜಾಗ ನೀಡಬೇಕಿದೆ. ಅದಕ್ಕೆ ಜಾಗ ಗುರುತಿಸುವ ಕೆಲಸ ನಡೆದಿದೆ. ಈ ಎಲ್ಲ ಅಂಶಗಳನ್ನು ಒಳಗೊಂಡ ವಿಸ್ತೃತ ವರದಿಯನ್ನು ಶೀಘ್ರದಲ್ಲೇ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮೇಕೆದಾಟು ಯೋಜನೆ ನಿರ್ಮಾಣದಿಂದ ನಮ್ಮ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಹಿಡಿದಿಟ್ಟುಕೊಂಡು ಇಂತಹ ಸಂಕಷ್ಟ ಕಾಲಕ್ಕೆ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಮೇಕೆದಾಟು ಯೋಜನೆಯಿಂದ ರಾಜ್ಯಕ್ಕೆ ಕುಡಿಯಲು ಬೇಕಾದ 10 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುವುದು. ಇದನ್ನು ದಕ್ಷಿಣ ಭಾರತ ಮುಖ್ಯಮಂತ್ರಿಗಳ ಸಭೆ ವೇಳೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಕಾರ್ಯಗತಗೊಳಿಸುವಲ್ಲಿ ಎಲ್ಲ ಪ್ರತಿಪಕ್ಷಗಳ ಸಹ ಬೆಂಬಲ ನೀಡುವುದಾಗಿ ತಿಳಿಸಿವೆ. ನೆಲ, ಜಲ, ಭಾಷೆಯ ವಿಷಯದಲ್ಲಿ ಒಗ್ಗಟ್ಟಿನಿಂದ ಇರಬೇಕು ಎನ್ನುವುದಕ್ಕೆ ಮೇಕೆದಾಟು ಯೋಜನೆಯೂ ಸಾಕ್ಷಿ. ಇದಕ್ಕೆ ಸುತ್ತೂರು ಶ್ರೀ, ಸಿದ್ಧಗಂಗಾ ಶ್ರೀ ಸೇರಿದಂತೆ ನಾಡಿನ ಮಠ್ಯಮಾನ್ಯಗಳು ಬೆಂಬಲ ನೀಡಿ ಆಶೀರ್ವದಿಸಿವೆ ಎಂದರು.
ರಾಜ್ಯದ ಇನ್ನೊಂದು ಪ್ರಮುಖ ಜಲಾಶಯವಾದ ತುಂಗಭದ್ರಾದಲ್ಲಿ 33 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದೆ. ಇದನ್ನು ತೆರವುಗೊಳಿಸಲು ಆಂಧ್ರ, ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಅವರು ಸಹಕಾರ ನೀಡಲಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ನೆರವಿನಿಂದ ಈ ಕಾರ್ಯ ಮಾಡಲಾಗುವುದು ಎಂದು ಹೇಳಿದರು.