ತಿ.ನರಸೀಪುರ ತಾಲೂಕು ಹೆಳವರಹುಂಡಿ ಗ್ರಾಮದಲ್ಲಿ ಕಳ್ಳತನ ನಡೆದ ಮನೆ.
ತಿ.ನರಸೀಪುರ: ಪಟ್ಟಣದ ಹೆಳವರಹುಂಡಿ ಹಾಗೂ ತಾಲೂಕಿನ ಹೊಸೂರುಹುಂಡಿ ಗ್ರಾಮದ ಎರಡು ಮನೆಗಳಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.
ಹೆಳವರಹುಂಡಿಯಲ್ಲಿ ಅಡುಗೆ ನವೀನ್ ಹಾಗೂ ಹೊಸೂರುಹುಂಡಿ ಗ್ರಾಮದ ಮಹೇಶ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅಂದಾಜು 40 ಗ್ರಾಂ ಚಿನ್ನ ಹಾಗೂ ನವೀನ್ ಅವರ ಮನೆಯಲ್ಲಿ 30 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ.
ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮಹೇಶ್ ಗ್ರಾಮದ ಮನೆಯೊಂದರಲ್ಲಿ ನಡೆಯುತ್ತಿದ್ದ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ತೆರಳಿದ್ದ ವೇಳೆ ಮನೆಯ ಬೀಗವನ್ನು ಮನೆಯ ಮುಂದೆ ಹಾಗೂ ಬೀರುವಿನ ಬೀಗವನ್ನು ಮನೆಯ ಒಳಗೆ ಇಟ್ಟು ಹೋಗಿದ್ದರೆನ್ನಲಾಗಿದ್ದು, ಕಳ್ಳರು ಸುಲಭವಾಗಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಹೆಳವರಹುಂಡಿಯಲ್ಲಿ ನವೀನ್ ಅವರ ಮನೆಯ ಬಾಗಿಲು ಮೀಟಿರುವ ಕಳ್ಳರು ಮನೆಯಲ್ಲಿಟ್ಟಿದ್ದ 40 ಸಾವಿರ ರೂ.ಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಇಬ್ಬರು ಪ್ರತ್ಯೇಕ ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ಸ್ಥಳಕ್ಕೆ ಶ್ವಾನದಳವನ್ನು ಕರೆಸಿ ಕಳ್ಳರ ಪತ್ತೆಗಾಗಿ ಶೋಧ ನಡೆಸಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸ್ ನಿರೀಕ್ಷಕ ಧನಂಜಯ, ಎಎಸ್‌ಐ ಚೆಲುವರಾಜು, ಶಂಕರ್ ಹಾಗೂ ಇಸ್ಮಾಯಿಲ್ ಭೇಟಿ ನೀಡಿ ಪರಿಶೀಲಿಸಿದರು.