‘ನಿರಂತರ’ ರಂಗ ಸಂಸ್ಥೆಯಿಂದ ಆರಂಭಗೊಂಡು ಒಂದು ತಿಂಗಳ ‘ಸಹಜ ರಂಗ’ಕ್ಕೆ ಚಾಲನೆ ನೀಡಲಾಯಿತು. ಪ್ರೊ.ಎಚ್.ಎಸ್. ಉಮೇಶ್, ಡಾ.ಎಸ್.ನರೇಂದ್ರ ಕುಮಾರ್, ಪ್ರಸಾದ್‌ಕುಂದೂರು ಹಾಗೂ ಶಿಬಿರಾರ್ಥಿಗಳು ಇದ್ದರು.
- ಶಿಕ್ಷಣದಲ್ಲಿ ‘ಹೇಗೆ ಕಲಿಯಬೇಕು ಎನ್ನುವುದಕ್ಕಿಂತ ‘ಏನನ್ನು ಕಲಿಯಬಾರದು, ಬಿಡಬೇಕು’ ಎಂಬುದನ್ನು ತಿಳಿಯುವುದು ಪ್ರಮುಖ
- ಕಲೆ ಮತ್ತು ಸಂಗೀತ ಮಾತ್ರ ಮನುಷ್ಯನನ್ನು ಸಂಪೂರ್ಣಗೊಳಿಸುತ್ತವೆ
ಮೈಸೂರು:‘ನಿರಂತರ’ ರಂಗ ಸಂಸ್ಥೆಯಿಂದ ಯುವ ಸಮುದಾಯ ಹಾಗೂ ಜೆನ್‌ಜೀ ತಲೆಮಾರನ್ನು ಒಳಗೊಂಡ ಸತತ 20ನೇ ವರ್ಷದ ‘ಸಹಜ ರಂಗ’ ಒಂದು ತಿಂಗಳ ರಂಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಮಾನಸಗಂಗೋತ್ರಿಯ ಗಾಂಧಿಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಮಾತನಾಡಿ, ಮೂಲಭೂತ ಬಂಧನಗಳಿಂದ ಹಿಡಿದು ಶಿಕ್ಷಣದವರೆಗೆ ಬಿಡುಗಡೆಯು ವಿಸ್ತರಿಸುತ್ತದೆ. ಶಿಕ್ಷಣದಲ್ಲಿ ‘ಹೇಗೆ ಕಲಿಯಬೇಕು ಎನ್ನುವುದಕ್ಕಿಂತ ‘ಏನನ್ನು ಕಲಿಯಬಾರದು, ಬಿಡಬೇಕು’ ಎಂಬುದನ್ನು ತಿಳಿಯುವುದು ಪ್ರಮುಖ ಎಂದರು.
ಕೇವಲ ವಿಜ್ಞಾನ ಅಥವಾ ಪ್ರಶಸ್ತಿಗಳು ಜೀವನವನ್ನು ಪೂರ್ಣಗೊಳಿಸುವುದಿಲ್ಲ. ಕಲೆ ಮತ್ತು ಸಂಗೀತ ಮಾತ್ರ ಮನುಷ್ಯನನ್ನು ಸಂಪೂರ್ಣಗೊಳಿಸುತ್ತವೆ ಎಂದರು.
ಆದರೆ ಇತ್ತೀಚಿನ ದಿನಗಳಲ್ಲಿ ರಂಗಭೂಮಿಯಲ್ಲಿ ನಟರ ಸಂಖ್ಯೆ ಕ್ಷೀಣಿಸುತ್ತಿದೆ. ರಂಗಭೂಮಿ ಮತ್ತೆ ಮೃಚ್ಛಕಟಿಕ ನಾಟಕದಂತೆ ಸಮಾಜದ ಎಲ್ಲ ವರ್ಗಗಳು ಒಂದಾಗುವ ಸಮುದಾಯ ಆಧಾರಿತ ಸ್ಥಿತಿಗೆ ಮರಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್ ಮಾತನಾಡಿ, ಇಂದಿನ ಯುವ ಸಮುದಾಯವು ಕೃತಕತೆ, ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆ ಮತ್ತು ಲಿಂಗ ತಾರತಮ್ಯದಂತಹ ಕ್ರೌರ್ಯದ ನಡುವೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ’ನಿರಂತರ’ ಸಂಸ್ಥೆ ರಂಗಭೂಮಿ ಮೂಲಕ ಕ್ರೌರ್ಯದ ಬದಲಿಗೆ ಕಾರುಣ್ಯವನ್ನು ತುಂಬುವ ಕೆಲಸ ಮಾಡುತ್ತಿದೆ ಎಂದರು.
’ನಿರಂತರ’ ಸಂಸ್ಥೆಯ ನಿರ್ದೇಶಕ ಪ್ರಸಾದ್‌ಕುಂದೂರು ಮಾತನಾಡಿ, ‘ಸಹಜ ರಂಗ’ ಕೇವಲ ಸಾಂಪ್ರದಾಯಿಕ ರಂಗಭೂಮಿ ಶಿಬಿರವಲ್ಲದೆ, ನಮ್ಮನ್ನು ನಾವು ಸಂಕೋಲೆಗಳಿಂದ ಮುಕ್ತಗೊಳಿಸಿಕೊಳ್ಳುವ ವಿಮೋಚನೆಯ ಮಾರ್ಗವಾಗಿದೆ. ರಂಗಭೂಮಿಯು ‘ಕಲೆಗಾಗಿ ಕಲೆ’ ಆಗಿರದೆ ಸಮಾಜಕ್ಕೆ ಜವಾಬ್ದಾರಿಯುತವಾಗಿರಬೇಕು. ನಾಟಕದ ಅಂತಿಮ ಪ್ರದರ್ಶನಕ್ಕಿಂತ ’ನಾಟಕ ಕಟ್ಟುವ ಪ್ರಕ್ರಿಯೆ’ ಅತ್ಯಂತ ಮುಖ್ಯವಾಗಿದ್ದು, ಇದು ಸ್ವಸ್ಥ ಮನಸ್ಸು, ಆರ್ದ್ರ ಹೃದಯ ಹಾಗೂ ಮಾನವೀಯತೆಯನ್ನು ರೂಪಿಸಲು ನೆರವಾಗುತ್ತದೆ ಎಂದು ವಿವರಿಸಿದರು.
ನಿರಂತರದ ಸುಗುಣ, ಶ್ರೀನಿವಾಸ್ ಪಾಲಹಳ್ಳಿ, ಮಾರ್ಗದರ್ಶಕರಾದ ರಾಮಣ್ಣ, ಅಪ್ಪಾಜಿಗೌಡ ಮಂಗಳಾ, ಮೆರೀನ ಪ್ರಸಾದ್, ಡಾ.ದೇವಕಿ ದರ್ಮಿಷ್ಟೆ ಇತರರು ಇದ್ದರು.