ಟೆರೇಶಿಯನ್ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ನಿರಂತರ ಸಹಜರಂಗ ರಂಗ ತರಬೇತಿ ಶಿಬಿರವನ್ನು ರಂಗಕರ್ಮಿ ಅರಸೀಕೆರೆ ಯೋಗಾನಂದ್ ಉದ್ಘಾಟಿಸಿದರು. ಡಾ. ಸಿಸ್ಟರ್ ಪ್ರಫುಲ್ಲಾ, ಸುಗುಣ, ವಿವೇಕ್ ಚಾರ್ಲ್ಸ್, ಚೇತನ್, ರಾಣಿ, ಸಂಕ್ರಾಂತಿ, ಶ್ರೀನಿವಾಸ್ ಪಾಲಹಳ್ಳಿ ಇತರರಿದ್ದರು. 
ಮೈಸೂರು

ರಂಗಭೂಮಿ ಹಲವು ಕಲೆಗಳ ಸಮ್ಮಿಲನ

ಪ್ರಮುಖ ಮುಖ್ಯಾಂಶಗಳು

  • ರಂಗಕರ್ಮಿ ಅರಸೀಕೆರೆ ಯೋಗಾನಂದ್ ಅಭಿಮತ
  • ರಂಗ ತರಬೇತಿ ಶಿಬಿರ ಉದ್ಘಾಟನೆ
  • ನಿರಂತರ ಫೌಂಡೇಷನ್‌ಯಿಂದ ಆಯೋಜನೆ

ಮೈಸೂರು: 

ಒತ್ತಡ ಹಾಗೂ ಒಂಟಿತನದ ಬದುಕಿನಿಂದ ಹೊರಬಂದು ಸೃಜನಶೀಲ ವ್ಯಕ್ತಿತ್ವ ರೂಪಿಸಿಕೊಳ್ಳಲು ರಂಗಭೂಮಿ ಅತ್ಯುತ್ತಮ ಮಾಧ್ಯಮ ಎಂದು ರಂಗಕರ್ಮಿ ಅರಸೀಕೆರೆ ಯೋಗಾನಂದ್ ಹೇಳಿದರು.

ನಿರಂತರ ಫೌಂಡೇಷನ್ ವತಿಯಿಂದ ಟೆರಿಶಿಯನ್ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ನಿರಂತರ ಸಹಜರಂಗ ರಂಗ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. 
ರಂಗಭೂಮಿ ಅಭಿನಯಕ್ಕೆ ಮಾತ್ರ ಸೀಮಿತವಲ್ಲ. ಸಂಗೀತ, ನೃತ್ಯ, ಬೆಳಕು ಹಾಗೂ ಸಂಭಾಷಣೆ ಸೇರಿದಂತೆ ಹಲವು ಕಲೆಗಳ ಸಮ್ಮಿಲನವಾಗಿದೆ ಎಂದರು. 
ಮೈಸೂರಿನ ಶ್ರೀಮಂತ ರಂಗಪರಂಪರೆ ಸ್ಮರಿಸಿದ ಅವರು, ಟಿ.ಪಿ.ಕೈಲಾಸಂ, ಸಂಸ ಮೊದಲಾದವರ ಕೊಡುಗೆಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಾಂಸ್ಕೃತಿಕ ತಾಣಗಳು, ಪ್ರಕೃತಿ ಮತ್ತು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಾಗಾರವು ಉಪನ್ಯಾಸಾಧಾರಿತವಾಗಿರದೆ ಸಂವಾದ, ಚಟುವಟಿಕೆ ಆಧಾರಿತವಾಗಿ ನಡೆಯಲಿದ್ದು, ವಿದ್ಯಾರ್ಥಿಗಳು ಅಂತಿಮವಾಗಿ ತಮ್ಮದೇ ಪ್ರದರ್ಶನ ರೂಪಿಸುವಂತೆ ತರಬೇತಿ ಪಡೆಯಲಿದ್ದಾರೆ ಎಂದು ತಿಳಿಸಿದರು.  
ಟೆರೆಶಿಯನ್ ಕಾಲೇಜಿನ ನಿರ್ದೇಶಕಿ ಡಾ. ಸಿಸ್ಟರ್ ಪ್ರಫುಲ್ಲಾ ಮಾತನಾಡಿ, ರಂಗಕಲೆ ಕೇವಲ ಅಭಿನಯಕ್ಕೆ ಸೀಮಿತವಾದ ಕಲೆಯಲ್ಲ. ಅದು ಅಭಿವ್ಯಕ್ತಿ, ಸೃಜನಶೀಲ, ಸಂವಹನ ಹಾಗೂ ಸಾಮಾಜಿಕ ಜಾಗೃತಿ ಬೆಳೆಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ವಿದ್ಯಾರ್ಥಿಗಳು ತಮ್ಮ ಕಂಫರ್ಟ್ ಜೋನ್‌ನಿಂದ ಹೊರಬಂದು ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಸಮಾಜದೊಂದಿಗೆ ಬೆರೆಯಲು ರಂಗಭೂಮಿ ನೆರವಾಗುತ್ತದೆ ಎಂದರು.
 ಈ ಒಂದು ತಿಂಗಳ ಕಾರ್ಯಾಗಾರವು ಕೇವಲ ಸಂಭಾಷಣೆ ಮತ್ತು ಅಭಿನಯ ಕಲಿಸುವುದಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವುದು, ಸೃಜನಶೀಲ ಬೆಳೆಸುವುದು, ತಂಡವಾಗಿ ಕೆಲಸ ಮಾಡುವುದು, ಇತರರ ಮಾತು ಆಲಿಸುವುದು ಹಾಗೂ ಯಶಸ್ವಿ ಪ್ರದರ್ಶನ ಹಿಂದಿನ ಶಿಸ್ತನ್ನು ಅರಿಯುವ ಅವಕಾಶವಾಗಿದೆ ಎಂದರು. 
ವೇದಿಕೆಯ ಮೇಲೆ ತಪ್ಪು ಮಾಡಲು ವಿದ್ಯಾರ್ಥಿಗಳು ಹೆದರಬಾರದು. ಪ್ರತಿಯೊಂದು ತಪ್ಪು ಒಂದು ಪಾಠ. ಪ್ರತಿಯೊಂದು ಅನುಭವವೂ ವ್ಯಕ್ತಿತ್ವದ ಬೆಳವಣಿಗೆಗೆ ದಾರಿ ಎಂದು ಹೇಳಿದರು.
ನಿರಂತರ ಫೌಂಡೇಷನ್ ಅಧ್ಯಕ್ಷ ಸುಗುಣ ಮಾತನಾಡಿ, ರಂಗಭೂಮಿ ಹಾಗೂ ಸಂಸ್ಕೃತಿ ಕೇವಲ ಮನರಂಜನೆಯ ಸಾಧನಗಳಲ್ಲ. ಅವು ಮನುಷ್ಯನ ಅಂತರಂಗದ ಅಭಿವ್ಯಕ್ತಿಗೆ ವೇದಿಕೆ. ಸಮಾಜವನ್ನು ಅರ್ಥಮಾಡಿಕೊಳ್ಳಲು ಹಾಗೂ ಆಲೋಚನೆಯ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಪ್ರಬಲ ಮಾಧ್ಯಮಗಳಾಗಿವೆ ಎಂದು ಅಭಿಪ್ರಾಯಪಟ್ಟರು. 
ಸಂಸ್ಕೃತಿ ಕೇವಲ ಹಾಡು, ನೃತ್ಯ ಮತ್ತು ಮನರಂಜನೆಗೆ ಸೀಮಿತಗೊಳಿಸದೆ, ಬದುಕಿನ ವೈವಿಧ್ಯ ಹಾಗೂ ವಿಭಿನ್ನ ಆಲೋಚನೆ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಲಿಂಗ, ಜಾತಿ ಮತ್ತು ಧರ್ಮದ ಸಂಕುಚಿತ ಚೌಕಟ್ಟಿನಿಂದ ಹೊರಬಂದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ತಮ್ಮ ಅಂತರಂಗದ ಧ್ವನಿ ಧೈರ್ಯದಿಂದ ವ್ಯಕ್ತಪಡಿಸಬೇಕು ಎಂದು ತಿಳಿಸಿದರು. 
ವಿವೇಕ್ ಚಾರ್ಲ್ಸ್, ಚೇತನ್, ರಾಣಿ, ಸಂಕ್ರಾಂತಿ, ನಿರಂತರದ ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ ಇತರರಿದ್ದರು.