ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಅನ್ನಪೂರ್ಣ ಅವರ ಎರಡು ಕೃತಿಗಳನ್ನು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಬಿಡುಗಡೆಗೊಳಿಸಿದರು. ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ಕವಿತಾ ರೈ, ನಿಂಗರಾಜು ಚಿತ್ತಣ್ಣನವರ, ಡಾ.ಅನ್ನಪೂರ್ಣ ಇದ್ದರು. 
ಮೈಸೂರು

ತಂತ್ರಜ್ಞಾನದಿಂದ ಓದಿನಲ್ಲಿ ಹಿಂದೆ ಬಿದ್ದ ಯುವ ಪೀಳಿಗೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಎನ್.ಎಂ.ತಳವಾರ ಬೇಸರ ಕೃತಿಗಳ ಬಿಡುಗಡೆ ಕಾರ್ಯಕ್ರಮ
  • ಕಾವ್ಯ ರಚನೆ ಫ್ಯಾಷನ್, ಮೋಜಿಗಾಗಿ ಅಲ್ಲ, ಕೀರ್ತಿ-ಪ್ರತಿಷ್ಠೆಗಾಗಿಯೂ ಅಲ್ಲ. ತನ್ನ ಮತ್ತು ಸಮಾಜದ ಪರಿವರ್ತನೆ ಬದ್ಧತೆಗಾಗಿ
  • ಹ್ಯಾಂಡ್‌ಸೆಟ್(ಮೊಬೈಲ್) ಕೆಟ್ಟರೆ ರಿಪೇರಿ ಮಾಡಬಹುದು. ಆದರೆ, ಮೈಂಡ್‌ಸೆಟ್ ಹಾಳಾದರೆ ದುರಸ್ತಿ ಬಹಳ ಕಷ್ಟಕರ.
ಮೈಸೂರು: ಕಾವ್ಯ ರಚನೆ ಫ್ಯಾಷನ್, ಮೋಜಿಗಾಗಿ ಅಲ್ಲ, ಕೀರ್ತಿ-ಪ್ರತಿಷ್ಠೆಗಾಗಿಯೂ ಅಲ್ಲ. ತನ್ನ ಮತ್ತು ಸಮಾಜದ ಪರಿವರ್ತನೆ ಬದ್ಧತೆಗಾಗಿ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಹೇಳಿದರು.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಅರಿವು ಸಂಶೋಧನಾ ವೇದಿಕೆ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಚಿಂತನ ಚಿತ್ತಾರ ಸಂಸ್ಥೆಯ ಸಹಯೋಗದಲ್ಲಿ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಅನ್ನಪೂರ್ಣ ಅವರ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬರವಣಿಗೆ ಸುಲಭ ಕೆಲಸವಲ್ಲ. ಯಾವುದರ ಕುರಿತು ಕಾವ್ಯ ರಚಿಸಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲೇ ಬರವಣಿಗೆಯನ್ನು ಬಹಳಷ್ಟು ಜನರು ನಿಲ್ಲಿಸಿಬಿಡುತ್ತಾರೆ. ಆದರೆ, ವಿಷಯ ವಸ್ತು ಹುಡುಕುವ ಅಗತ್ಯವಿಲ್ಲ. 
ಅದು ತನ್ನತಾನೇ ಗೋಚರಿಸಬೇಕು. ಕವಿಯ ಅನುಭವ, ಭಾಷೆ, ಭಾವದ ಹದವಿದ್ದರೆ ಕಾವ್ಯ ತಾನೇ ಹುಟ್ಟಿಕೊಳ್ಳುತ್ತದೆ. ಅದು ಸಹೃದಯದವರಿಗೂ ತಟ್ಟುತ್ತದೆ. ಇಲ್ಲವಾದರೆ, ಓದುಗರ ಹೃದಯಕ್ಕೆ ಕಾವ್ಯ ಇಳಿಯಲ್ಲ ಎಂದರು.
ತಂತ್ರಜ್ಞಾನದಲ್ಲೇ ಕಳೆದುಹೋಗಿರುವ ಈಗಿನ ಯುವ ಪೀಳಿಗೆ ಓದಿನಲ್ಲಿ ಹಿಂದೆ ಬಿದ್ದಿದೆ. ಏಕೆ ಓದಬೇಕು ಎಂಬ ಉದಾಸಿನತೆ ಬಂದಿದೆ. ಸದಭಿರುಚಿ ಬೆಳೆಸುವ ಓದು ಮಹತ್ವ ಕ್ರಿಯೆ. ಅದು ವ್ಯಕ್ತಿತ್ವವನ್ನೂ ಬೆಳೆಸುತ್ತಿದೆ. ಮೌಲ್ಯವನ್ನು ತುಂಬಿ ವಿಭಿನ್ನ ವ್ಯಕ್ತಿತ್ವ ರೂಪಿಸುತ್ತದೆ. ಹೀಗಾಗಿ, ಓದು ಮಹತ್ವದು ಎಂದರು.
ಮೊಬೈಲ್ ಮಾಯ ಎಲ್ಲರನ್ನೂ ಆವರಿಸಿಕೊಂಡಿದೆ. ಹ್ಯಾಂಡ್‌ಸೆಟ್(ಮೊಬೈಲ್) ಕೆಟ್ಟರೆ ರಿಪೇರಿ ಮಾಡಬಹುದು. ಆದರೆ, ಮೈಂಡ್‌ಸೆಟ್ ಹಾಳಾದರೆ ದುರಸ್ತಿ ಬಹಳ ಕಷ್ಟಕರ. ರುಚಿ ಕೆಟ್ಟರೆ ಸರಿಪಡಿಸಿಕೊಳ್ಳಬಹುದು. ಅದೇ ಅಭಿರುಚಿಯೇ ಕೆಟ್ಟರೆ ವ್ಯಕ್ತಿತ್ವವೇ ಹಾಳಾಗಿ ಹೋಗುತ್ತದೆ. ಓದಿನಿಂದ ಉತ್ತಮ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಈಗ ಎಲ್ಲದಕ್ಕೂ ಆತುರವೇ. ಪ್ರಾಕೃತಿಕ ಚಿಂತನೆ, ಸಹಜ ಬದುಕೇ ಇದೀಗ ದೂರವಾಗುತ್ತಿದೆ. ಇದರಿಂದಲೇ ಅನೇಕ ಸಮಸ್ಯೆಗಳನ್ನು  ಮೈಮೇಲೆ ಎಳೆದುಕೊಳ್ಳಲಾಗುತ್ತಿದೆ ಎಂದರು.
ಡಾ.ಅನ್ನಪೂರ್ಣ ಅವರ ‘ಅಮ್ಮನ ಹೆಬ್ಬೆರಳು’ 2ನೇ ಕವನ ಸಂಕಲನ, ‘ಕೊರಡು ಕೊನರುವುದೇನಯ್ಯ’ ಮೊದಲ ಕಥಾ ಸಂಕಲನ ಬಿಡುಗಡೆಗೊಳಿಸಲಾಯಿತು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಕರಾಮುವಿ ಕನ್ನಡ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಕವಿತಾ ರೈ, ಚಿಂತನ ಚಿತ್ತಾರ ಪ್ರಕಾಶನದ ನಿಂಗರಾಜು ಚಿತ್ತಣ್ಣನವರ ಇದ್ದರು.