ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಪ್ರೊ.ನಿರ್ಮಲ್ಯ ನಾರಾಯಣ ಚಕ್ರವರ್ತಿ ಚಾಲನೆ ನೀಡಿದರು. ಪ್ರೊ. ವೀರನಾರಾಯಣ ಪಾಂಡುರಂಗಿ,ಪ್ರೊ.ದಿಲೀಪ್ ಕುಮಾರ್ ಮೊಹಾಂತ, ಗಿರೀಶ್ ಕುಮಾರ್, ರಘುನಾಥ ಘೋಷ್, ಪ್ರೊ.ಎಂ.ಡ್ಯಾನಿಯಲ್, ಪ್ರೊ. ಎಸ್.ವೆಂಕಟೇಶ್, ಪ್ರೊ. ವಿ.ಎನ್.ಶೇಷಗಿರಿ ರಾವ್ ಇದ್ದರು. 
ಮೈಸೂರು

ಕೃಷ್ಣನ ಮಾಯಾ ಲೀಲೆಯೇ ಪ್ರಪಂಚ:ಪ್ರೊ.ನಿರ್ಮಲ್ಯ ನಾರಾಯಣ್ ಚಕ್ರವರ್ತಿ ಅಭಿಮತ

ಮೈಸೂರು:ಮಾಯೆ ಸೃಷ್ಟಿಸುವ ಆನಂದದ ಕ್ರಿಯೆಗಳನ್ನು ನೃತ್ಯ, ಸಂಗೀತದ ರೂಪದಲ್ಲಿ ಪ್ರಸ್ತಾಪಿಸುವ ಪಂಥವು ಮನುಷ್ಯನ ಆತ್ಮ ದೈವತ್ವ ಹೊಂದುವುದನ್ನು ತಿಳಿಸುತ್ತದೆ ಎಂದು ಕೋಲ್ಕತಾದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರ್ಮಲ್ಯ ನಾರಾಯಣ್ ಚಕ್ರವರ್ತಿ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ‘ಶ್ರೀ ಮಧ್ವ ಮತ್ತು ಶ್ರೀ ಚೈತನ್ಯ ವೈಷ್ಣವ ಚಳವಳಿಗೆ ಶಕ್ತಿ ತುಂಬಿದ ಅದ್ಭುತ ಪ್ರವರ್ತಕರು’ ವಿಷಯ ಕುರಿತ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜೀವ ಮತ್ತು ಪರಮಾತ್ಮನನ್ನು ಭಿನ್ನ ಹಾಗೂ ಏಕವಾಗಿ ನೋಡುವ ಎರಡು ಬಗೆಯ ಸಿದ್ಧಾಂತವಿದೆ. ಚೈತನ್ಯ ಮಹಾಪ್ರಭು ಅವರ ಗೌಡೀಯ ವೈಷ್ಣವ ಪಂಥವು ಜೀವ, ಪರಮಾತ್ಮನ ಸಂಬಂಧವನ್ನು ಭಕ್ತಿ ಮಾರ್ಗದಲ್ಲಿ ಶೋಧಿಸುತ್ತದೆ. ಇಲ್ಲಿ ಬ್ರಹ್ಮನೇ ಕೃಷ್ಣ, ಆತನ ಶಕ್ತಿಯು ಸೃಷ್ಟಿಸುವ ವಿವಿಧ ರೂಪ, ಮಾಯಾ ಲೀಲೆಯೇ ಪ್ರಪಂಚ ಎಂದರು.
ಮನುಷ್ಯ, ದೇವರ ಸಂಬಂಧವನ್ನು ದಾರ್ಶನಿಕರು ನಾನಾ ವಿಧದಲ್ಲಿ ವಿವರಿಸಿದ್ದು, ಇದನ್ನು ಸೂಕ್ತವಾಗಿ ಅರಿಯುವುದೇ ಜ್ಞಾನ. ಪ್ರಪಂಚವೇ ದೇವರ ಮಾಯೆಯ ಸೃಷ್ಟಿ ಮತ್ತು ಅದು ಸತ್ಯವೂ ಹೌದು ಎಂದು ಪ್ರತಿಪಾದಿಸುತ್ತದೆ. ಈ ಲೀಲೆಯನ್ನು ಅರಿಯುವುದೇ ದೇವರ ಸ್ವರೂಪ ತಿಳಿಯುವ ಮಾರ್ಗ ಎಂದು ವಿವರಿಸಿದರು.
ಬೆಂಗಳೂರಿನ ಪೂರ್ಣಪ್ರಜ್ಞಾ ಸಂಶೋಧನಾ ಮದಿರಂ ನಿರ್ದೇಶಕ ಪ್ರೊ.ವೀರನಾರಾಯಣ ಪಾಂಡುರಂಗಿ, ಕೋಲ್ಕತಾದ ಕಲ್ಯಾಣಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ದಿಲೀಪ್ ಕುಮಾರ್ ಮೊಹಾಂತ, ಭಾರತೀಯ ತತ್ವಶಾಸ್ತ್ರ ಸಂಶೋಧನಾ ಮಂಡಳಿ(ಐಸಿಪಿಆರ್) ಸದಸ್ಯ ಗಿರೀಶ್ ಕುಮಾರ್, ರಘುನಾಥ ಘೋಷ್, ತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಪ್ರೊ.ಎಂ.ಡ್ಯಾನಿಯಲ್, ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಎಸ್.ವೆಂಕಟೇಶ್, ಪ್ರೊ. ವಿ.ಎನ್.ಶೇಷಗಿರಿ ರಾವ್ ಇತರರು ಇದ್ದರು.