ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 62ರಲ್ಲಿ ತಂಬಾಕು ಬೆಳೆಗಾರರು ಹಾಗೂ ವರ್ತಕರ ಸಭೆ ಆಯೋಜಿಸಲಾಗಿತ್ತು. ಯಶವಂತ್ ಕುಮಾರ್, ವಿಶ್ವಶ್ರೀ, ಶ್ರೀನಿವಾಸ್, ರಾಮಾಂಜನೇಯಲು, ಗೋಪಾಲ್, ಮಾರಣ್ಣ ಇದ್ದರು.
- ಕೇಂದ್ರ ತಂಬಾಕು ಮಂಡಳಿ ಚೇರ್ಮನ್ ಯಶವಂತ್ ಕುಮಾರ್
- ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 62
ಕಂಪಲಾಪುರ: ಆಂಧ್ರಪ್ರದೇಶ, ಕರ್ನಾಟಕ ತಂಬಾಕು ಬೆಳೆಗಾರರು ಎಂದು ವಿಂಗಡಣೆ ಮಾಡದೆ ಎಲ್ಲ ರೈತರ ಹಿತ ಕಾಪಾಡುವುದೇ ತಂಬಾಕು ಮಂಡಳಿ ಗುರಿ ಎಂದು ಕೇಂದ್ರ ತಂಬಾಕು ಮಂಡಳಿ ಚೇರ್ಮನ್ ಯಶವಂತ್ ಕುಮಾರ್ ತಿಳಿಸಿದರು.
ಸಮೀಪದ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 62 ರಲ್ಲಿ ಮಂಗಳವಾರ ಆಯೋಜಿಸಿದ್ದ ರಾಮನಾಥಪುರ, ಹುಣಸೂರು, ಎಚ್.ಡಿ. ಕೋಟೆ, ಪಿರಿಯಾಪಟ್ಟಣ ತಂಬಾಕು ಮಾರುಕಟ್ಟೆಗಳ ಬೆಳೆಗಾರರು ಹಾಗೂ ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ನಾನು ತಂಬಾಕು ಮಂಡಳಿಯ ಚೇರ್ಮನ್ ಆದ ನಂತರ ಕರ್ನಾಟಕಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದು, ಕರ್ನಾಟಕದ ರೈತರು ಶ್ರಮಜೀವಿಗಳು ಹಾಗೂ ಶಿಸ್ತು ಬದ್ಧತೆಗೆ ಹೆಸರಾದವರು. ಅಂತ ರೈತರಿಗೆ ಅನ್ಯಾಯವಾದರೆ ಅದನ್ನು ನಾನು ಸಹಿಸುವುದಿಲ್ಲ ಎಂದರು.
ಈ ಸಾಲಿನ ಹರಾಜು ಪ್ರಕ್ರಿಯೆಯಲ್ಲಿ ಬೆಲೆಯಲ್ಲಿ ಇಳಿಕೆಯಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ಆ ಕಾರಣಕ್ಕೆ ಮಾರುಕಟ್ಟೆಗಳಲ್ಲಿ ಹರಾಜು ಸ್ಥಗಿತಗೊಂಡಿತ್ತು. ನಂತರ ಇದು ಕೇಂದ್ರ ಸಚಿವರ ಗಮನಕ್ಕೆ ಬರಲಾಗಿ ಇತ್ತೀಚೆಗೆ ಎಚ್.ಡಿ.ಕುಮಾರಸ್ವಾಮಿ, ಸಚಿವ ಕೆ.ವೆಂಕಟೇಶ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಮ್ಮುಖದಲ್ಲಿ ವರ್ತಕರ ಸಭೆ ನಡೆದು ಅಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ಎಂದರು.
ಹರಾಜು ನಿರ್ದೇಶಕಿ ವಿಶ್ವಶ್ರೀ ಮಾತನಾಡಿ, ಅಧಿಕೃತ ತಂಬಾಕು ಬೆಳೆಗಾರರು ಹಾಗೂ ಅನಧಿಕೃತ ತಂಬಾಕು ಬೆಳೆಗಾರರು ಎಂಬ ಬೇಧಭಾವ ಮಾಡದೆ ಎಲ್ಲ ರೈತರನ್ನು ಒಂದೇ ರೀತಿ ಕಾಣಲಾಗುವುದು. ಕಳೆದ ಬಾರಿ ತಂಬಾಕಿನ ಸರಾಸರಿ ಬೆಲೆಗಿಂತ ಈ ಸಾಲಿನಲ್ಲಿ ಸರಾಸರಿ ಬೆಲೆ ಹೆಚ್ಚಾಗಿದೆ. ಆ ನಂತರ ಖರೀದಿದಾರರು ಯಾವ ಯಾವ ಮಾರುಕಟ್ಟೆಗಳಲ್ಲಿ ಯಾವ ರೀತಿ ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದು ಕಡಿಮೆ ಭಾಗವಹಿಸಿರುವ ಖರೀದಿದಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶ್ರೀನಿವಾಸ್, ರೈತ ಮುಖಂಡರಾದ ಸಣ್ಣತಿಮ್ಮೆಗೌಡ, ಹಿಟ್ನಳ್ಳಿ ಪರಮೇಶ್, ಹೊಸೂರು ಕುಮಾರ್, ಜಿ.ಸಿ.ವಿಕ್ರಂ ರಾಜ್, ವಕೀಲ ಮೂರ್ತಿ, ಚಲುವಯ್ಯ, ಸುರಗಳ್ಳಿ ಶಂಕರೇಗೌಡ ಮಲ್ಲೇಶ್ ಮಾತನಾಡಿದರು. ಸಭೆಯಲ್ಲಿ ಹರಾಜು ವ್ಯವಸ್ಥಾಪಕ ರಾಮಾಂಜನೇಯಲು, ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ಎಚ್.ಕೆ.ಗೋಪಾಲ್, ಪಿರಿಯಾಪಟ್ಟಣ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ, ಮಾರುಕಟ್ಟೆ ಸಂಖ್ಯೆ 62 ರ ಹರಾಜು ಅಧಿಕ್ಷಕ ಸಿದ್ದರಾಮ ಢಾಂಗೆ ಇತರರಿದ್ದರು.