ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾನೂನು ಕಾಲೇಜಿನಲ್ಲಿ ಶುಕ್ರವಾರ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ‘ಲಾಗೈಡ್’ ಎಚ್.ಎನ್.ವೆಂಕಟೇಶ್, ಪ್ರೊ.ಎಸ್. ಪಿ.ಮಂಜುನಾಥ್, ಡಾ.ಸಿ.ಜಿ.ಬೆಟಸೂರಮಠ, ಪ್ರೊ.ಕೆ.ಎಸ್.ಸುರೇಶ್ ಇತರರು ಇದ್ದರು.
- ಜೆಎಸ್ಎಸ್ ಸೇರಿದಂತೆ ಮಠಗಳು ಜನ ಬದುಕು ಕೊಟ್ಟಿಕೊಳ್ಳುವ ಗ್ಯಾರಂಟಿಯನ್ನು ನೀಡುತ್ತಾ ಬರುತ್ತಿವೆ
- ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿಫಲದಿಂದ ಆಯ್ಕೆಗೆ ಅಭಿನಂದನೆ.
ಮೈಸೂರು:ಸರ್ಕಾರ ಗ್ಯಾರಂಟಿ ನೀಡುವ ಹತ್ತಾರು ವರ್ಷಗಳ ಮೊದಲೇ ಜೆಎಸ್‌ಎಸ್ ಮಠ, ಮೂರು ಗ್ಯಾರಂಟಿಗಳನ್ನು ನೀಡುವ ಮೂಲಕ ಹಲವರ ಜೀವನ ಹಸನುಗೊಳಿಸಿದೆ ಎಂದು ಹಿರಿಯ ವಕೀಲ ‘ಲಾಗೈಡ್’ ಎಚ್.ಎನ್.ವೆಂಕಟೇಶ್ ತಿಳಿಸಿದರು.
ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗ ಎಲ್ಲೆಡೆ ಗ್ಯಾರಂಟಿಗಳು ಸದ್ದು ಮಾಡುತ್ತಿವೆ. ಆದರೆ ಜೆಎಸ್‌ಎಸ್ ಮಠ ಅನ್ನ, ಆಸ್ಪತ್ರೆಗಳ ಮೂಲಕ ಆರೋಗ್ಯ ಹಾಗೂ ಹಲವಾರು ವಿದ್ಯಾಸಂಸ್ಥೆಗಳ ಮೂಲಕ ಅಕ್ಷರ ಕಲಿಸುವ ಕಾಯಕ ಮಾಡುತ್ತಿದೆ. ಈ ಮೂಲಕ ಹಲವಾರು ಜನ ಬದುಕು ಕೊಟ್ಟಿಕೊಳ್ಳುವ ಗ್ಯಾರಂಟಿಯನ್ನು ನೀಡುತ್ತಾ ಬರುತ್ತಿದೆ. ಈ ಗ್ಯಾರಂಟಿಗಳು ಜೀವನ ಪರ್ಯಂತ ಇರುತ್ತವೆ ಎಂದು ಬಣ್ಣಿಸಿದರು.
ಯುವ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿರುವುದು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿಫಲ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಜತೆಗೆ ಇವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಈ ಸಾಧನೆ ಜೆಎಸ್‌ಎಸ್ ವಿದ್ಯಾಪೀಠವು ತನ್ನ ಸ್ಥಾಪಕ ತತ್ವಗಳಿಗೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವುದಕ್ಕೆ ಉತ್ತಮ ಉದಾಹರಣೆ. ಜೆಎಸ್‌ಎಸ್ ಕಾನೂನು ಕಾಲೇಜು ಶ್ರಮವಹಿಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್. ಪಿ.ಮಂಜುನಾಥ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‌ಎಸ್ ಕಾನೂನು ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಕೆ.ಎಸ್.ಸುರೇಶ್ ಇತರರು ಇದ್ದರು.
ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಕೆ.ಬಿ.ರೋಷನಿ, ನಿತ್ಯಾ ಎಸ್.ಗುಜ್ವಾರ್, ಎನ್.ನಿವೇದಿತಾ, ಸುಪ್ರಿಯಾ ನವಾಲಿ, ಮುದಳಗಿ ರಶ್ಮಿ ವೀರಭದ್ರಪ್ಪ, ಕೆ.ಸಿ.ಸುಹಾಸ್, ಮಹದೇವ ಕೆ.ಗೌಡ, ಹಾಗೂ ರಾಹುಲ್ ಆದಿನಾಥ್ ನ್ಯಾಮಗೌಡ ಅವರನ್ನು ಅಭಿನಂದಿಸಲಾಯಿತು.