ಕಿರುರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಎಂಎಲ್‌ಸಿ ಸಿ.ಎನ್.ಮಂಜೇಗೌಡ ಉದ್ಘಾಟಿಸಿದರು. ಕೆ.ಎಸ್.ಮಧುಸೂಧನ್, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ.ಸುದರ್ಶನ್, ಪ್ರಕಾಶ್, ಕೆ.ಪಿ.ವೆಂಕಟೇಶ್ ಇತರರಿದ್ದರು. 
ಮೈಸೂರು

ಸರ್ವಜ್ಞರ ವಿಚಾರಗಳು ಮೌಲ್ಯಯುತ

ಪ್ರಮುಖ ಮುಖ್ಯಾಂಶಗಳು

  • ಧರ್ಮ, ನ್ಯಾಯ, ಸಂಸ್ಕೃತಿ ಹಾಗೂ ವಿದ್ಯೆಯ ಮಹತ್ವದ ಬಗ್ಗೆ ಪ್ರಚಾರ ಮಾಡಿದ ಸರ್ವಜ್ಞರು
  • ಮುಂದಿನ ಪೀಳಿಗೆಗೆ ಮಹಾನ್ ಕವಿಯ ಕಥೆಯನ್ನು ತಿಳಿಸಿ
ಮೈಸೂರು: ಸಂತ ಕವಿ ಸರ್ವಜ್ಞರ ವಿಚಾರಧಾರೆಗಳು ಹಾಗೂ ತ್ರಿಪದಿಗಳಲ್ಲಿರುವ ಮೌಲ್ಯವನ್ನು ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಯಾಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಿರುರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವರು.
 ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರ್ವಜ್ಞರು ವಚನಗಳ ಮೂಲಕ ತ್ರಿಪದಿ ರಚಿಸಿದ್ದಾರೆ ಎಂದು ಹೇಳಿದರು.
ಧರ್ಮ, ನ್ಯಾಯ, ಸಂಸ್ಕೃತಿ ಹಾಗೂ ವಿದ್ಯೆಯ ಮಹತ್ವದ ಬಗ್ಗೆ ಸರ್ವಜ್ಞರು ಪ್ರಚಾರ ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಒಬ್ಬ ಮಹಾನ್ ಕವಿಯ ಕಥೆಯನ್ನು ತಿಳಿಸಿ ಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ನಡೆಸುವ ಮಹನೀಯರ ಜಯಂತಿಗಳಲ್ಲಿ ಸಂಘ-ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಗರದ ಬಡಾವಣೆಗಳಿಗೆ, ವೃತ್ತಗಳಿಗೆ ಸರ್ವಜ್ಞರಂತಹ ಮಹನೀಯರ ಹೆಸರು ನಾಮಕಾರಣ ಮಾಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಾಯಕ ಶಿಕ್ಷಕ ಕೆ.ಎಸ್.ಮಧುಸೂದನ್ ಮಾತನಾಡಿ, ಸರ್ವಜ್ಞರ ತ್ರಿಪದಿಯ ಸಾಲುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಬಂಗಾರವಾಗುವುದರಲ್ಲಿ ಎರಡು  ಮಾತಿಲ್ಲ. ತಂತ್ರಜ್ಞಾನದ ಕಾಲಘಟ್ಟದಲ್ಲಿ ನಾವಿದ್ದರೂ ಸರ್ವಜ್ಞರು ಹೇಳಿ ಹೋಗಿರುವ ವಚನಗಳು ಮುಂದಿನ ಭವಿಷ್ಯಕ್ಕೆ ಸಹಾಯಕವಾಗುವ ಹಲವಾರು ವಿಷಯಗಳಿವೆ ಎಂದು ತಿಳಿಸಿದರು.
ಜ್ಞಾನ ಸಂಪಾದನೆ ಮಾಡಬೇಕು ಎಂದರೆ ಕೆಲವೊಂದು ವಿಚಾರ ಬಲ್ಲವರಿಂದ ತಿಳಿದುಕೊಳ್ಳಬೇಕು. ಕೆಲವೊಂದು ವಿಚಾರ ಸ್ವತಃ ಪ್ರಯತ್ನ ಮೂಲಕ ತಿಳಿದುಕೊಳ್ಳಬೇಕು ಎಂಬ ತತ್ವವನ್ನು ಸರ್ವಜ್ಞರು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
 ಪ್ರಪಂಚದಲ್ಲಿ ಸಾಕಷ್ಟು ಜನ ಇದ್ದು ಹೋಗುತ್ತಾರೆ. ಆದರೆ ಕೆಲವೇ ಬೆರಳಣಿಕೆಯಷ್ಟು ಜನರನ್ನು ಮಾತ್ರ ನಾವು ನೆನಪಿಸಿಕೊಳ್ಳುತ್ತೇವೆ. ಜತೆಗೆ ತಲೆಮಾರುಗಳಿಂದ ನೆನಪಿಸಿಕೊಳ್ಳುತ್ತ ಬರುವ ಮಹಾನೀಯರಲ್ಲಿ ಸರ್ವಜ್ಞರು ಸಹ ಒಬ್ಬರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್, ಕುಂಬಾರ ಸಂಘದ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಕೆ.ಪಿ ವೆಂಕಟೇಶ್, ಬಾಲಕೃಷ್ಣ, ಡಾ.ಗೌರಿ ಶೆಟ್ಟಿ, ವಾಸು, ಮಂಜುನಾಥ್, ಯಮುನಾ ನಾಗರಾಜ್, ಕುಮಾರ್ ಇತರರು ಇದ್ದರು.