- ವರ್ಷಂಪೂರ್ತಿ ಕುಡಿಯಲೂ ಸಾಲಲ್ಲ ಡ್ಯಾಂ ನೀರು!
- ಕೃಷಿ ಬೆಳೆಗಳಿಗೆ ಪೂರೈಸುವುದು ಇನ್ನೂ ಕಷ್ಟಕರ
- ಮುಂಗಾರು ಮಳೆಯ ಅವಕೃಪೆ ಎಫೆಕ್ಟ್
- ಜಿಲ್ಲೆಯ ಜಲಾಶಯಗಳ ಮಟ್ಟ ತೀವ್ರ ಕುಸಿತ
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಅವಕೃಪೆಯಿಂದಾಗಿ ಜಿಲ್ಲೆಯ ಜಲಾಶಯಗಳ ನೀರಿನಮಟ್ಟ ತೀವ್ರವಾಗಿ ಕುಸಿದಿದ್ದು, ಈಗಿರುವ ನೀರು ವರ್ಷವಿಡೀ ಕುಡಿಯಲು ಸಾಕಾಗಲ್ಲ. ಇನ್ನೂ ಕೃಷಿ ಬೆಳೆಗಳಿಗೆ ನೀರುಣಿಸುವುದು ಕಷ್ಟವಾಗಲಿದೆ.
ಜಿಲ್ಲೆಯ ಪ್ರಮುಖ ಜಲಾಶಯವಾದ ಕಬಿನಿ ಡ್ಯಾಂನ ನೀರಿನ ಒಳಹರಿವು ಗಣನೀಯವಾಗಿ ಕುಸಿದಿದೆ. ನೀರಿನ ಸಂಗ್ರಹ ಬಹಳಷ್ಟು ತಗ್ಗಿದೆ.
ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದ್ದು, ಇದರಲ್ಲೇ ತಮಿಳುನಾಡಿಗೂ ನೀರು ಹರಿಸುವ ಅನಿವಾರ್ಯತೆಯೂ ಇದೆ. ಹೀಗಾಗಿ, ಈ ಸಾಲಿನಲ್ಲಿ ಕುಡಿಯುವ ನೀರಿಗಾಗಿ ತತ್ವಾರ ಸೃಷ್ಟಿಯಾಗುವುದು ನಿಶ್ಚಿತ. ಜಲವಿವಾದವೂ ಉಲ್ಬಣಿಸುವುದು ಖಚಿತ.
ಮುಂಗಾರು ಆರಂಭವಾಗಿ ತಿಂಗಳು ಕಳೆದಿದ್ದರೂ ಕಾವೇರಿ, ಇದರ ಉಪ ನದಿ ಕಪಿಲೆಗೆ ಜೀವಕಳೆ ಬಂದಿಲ್ಲ. ವಾಡಿಕೆಯಷ್ಟೂ ಮಳೆಯಾಗಿಲ್ಲ. ಇದರಿಂದ ನದಿಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಕ್ಷೀಣಿಸಿದೆ.
ಸಾಮಾನ್ಯವಾಗಿ ಮೇ ಅಂತ್ಯದಿಂದ ಕೆಆರ್‌ಎಸ್, ಕಬಿನಿ, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಬೇಕಾಗಿತ್ತು. ಆದರೆ, ಇದು ಈ ಸಲ ಹುಸಿಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಪೂರ್ಣಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆ ಸವಾಲಾಗಲಿದೆ.
ಎಲ್ಲೆಡೆ ವರುಣನ ಅಭಾವದಿಂದ ಸಮಸ್ಯೆ ಸೃಷ್ಟಿ
ಕಬಿನಿ ಸೇರಿದಂತೆ ನಗು, ತಾರಕದಂತಹ ಚಿಕ್ಕ ಜಲಾಶಯಗಳೂ ಜಿಲ್ಲೆಯಲ್ಲಿವೆ. ಕೇರಳದ ವಯನಾಡಿನ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಜಿಲ್ಲೆಯ ಜಲಾಶಯಗಳಿಗೆ ಸರಾಗವಾಗಿ ನೀರು ಹರಿದು ಬರುತ್ತದೆ.
ಆದರೆ, ಈ ಸಲ ಮೈಸೂರು ಸೇರಿದಂತೆ ವಯನಾಡು, ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ನಿರೀಕ್ಷಿತ ಪಮಾಣದಲ್ಲಿ ಮಳೆಯಾಗಿಲ್ಲ. ಎಲ್ಲೆಡೆ ಮಳೆ ಅಭಾವ ಕಾಡುತ್ತಿದೆ. ಇದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.
ಎಚ್.ಡಿ.ಕೋಟೆಯ ಕಾಡಂಚಿನಲ್ಲಿರುವ ಕಬಿನಿ ಜಲಾಶಯದಲ್ಲಿ ಬರೀ 4.99 ಟಿಎಂಸಿ ನೀರು ಇದೆ. ನೀರಿನ ಪ್ರಮಾಣ ಶೇ.25ಕ್ಕಿಂತ ಕೆಳಗಿಳಿದಿದೆ. ಕಳೆದ ವರ್ಷಕ್ಕಿಂತ ಶೇ.70 ಕಡಿಮೆ ನೀರಿದೆ. ಹಿಂದಿನ 2025ರಲ್ಲಿ ಈ ಹೊತ್ತಿನಲ್ಲಿ 16.66 ಟಿಎಂಸಿ ನೀರಿತ್ತು.
ಆದರೀಗ ನೀರಿನ ಮಟ್ಟ ನೆಲಕಚ್ಚಿದೆ. 19.52 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಕಬಿನಿಯ ಒಳ ಹರಿವು 1890 ಕ್ಯೂಸೆಕ್‌ನಷ್ಟಿದೆ. ಅದೇ ಕಳೆದ ವರ್ಷ ಈ ಸಂದರ್ಭದಲ್ಲಿ 31,644 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಅಂತೆಯೇ ಕಳೆದ ವರ್ಷ ಹೊರಹರಿವು ಸಹ ಹೆಚ್ಚಿತ್ತು. ಅದು 30 ಸಾವಿರ ಕ್ಯೂಸೆಕ್ ದಾಟಿತ್ತು. ಈ ವರ್ಷ ಬರೀ 500 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಕಳೆದ ವರ್ಷ 2279.33 ಅಡಿಯಷ್ಟು ನೀರಿದ್ದರೆ ಈ ಸಲ 2253.17 ಅಡಿಯಷ್ಟು ಮಾತ್ರ ನೀರಿದೆ.
ತಾರಕ ಜಲಾಶಯದ ಒಳ-ಹೊರ ಹರಿವು ಶೂನ್ಯ
ನಗು ಜಲಾಶಯದ ಒಳ ಹರಿವು ಕೇವಲ 16 ಕ್ಯೂಸೆಕ್ ಇದ್ದು, ಕಳೆದ ವರ್ಷ ಈ ಹೊತ್ತಿನಲ್ಲಿ 1,511 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. 4.89 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ನಗು ಜಲಾಶಯದಲ್ಲಿ ಈಗ 2.52 ಟಿಎಂಸಿ ನೀರು ಮಾತ್ರ ಇದೆ. ಕಳೆದ ವರ್ಷ ಈ ಸಂದರ್ಭದಲ್ಲಿ 3.63 ಟಿಎಂಸಿ ನೀರು ಸಂಗ್ರಹವಾಗಿ ಭರ್ತಿಯಾಗುವ ಹಂತಕ್ಕೆ ಬಂದಿತ್ತು.
ಇನ್ನೂ ತಾರಕ ಜಲಾಶಯದ ಕಥೆಯೂ ಭಿನ್ನವಾಗಿಲ್ಲ. ಇದರ ಒಳ-ಹೊರ ಹರಿವು ಶೂನ್ಯವಾಗಿದೆ. 3.94 ಟಿಎಂಸಿ ನೀರಿನ ಸಂಗ್ರಹದ ಈ ಡ್ಯಾಂನಲ್ಲಿ ಇದೀಗ 2.27 ಟಿಎಂಸಿ ನೀರಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ 3.12 ಟಿಎಂಸಿಗಿಂತ ಹೆಚ್ಚಿನ ಪ್ರಮಾಣದ ನೀರಿತ್ತು.
ಒಳಹರಿವು ಕುಸಿತದಲ್ಲಿ ಕೆಆರ್‌ಎಸ್ ದಾಖಲೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರ ಕುಸಿದಿದೆ. 49.45 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದಲ್ಲಿ ಕೇವಲ 11.25 ಟಿಎಂಸಿ ನೀರು ಮಾತ್ರವಿದೆ. 124.80 ಅಡಿಯಷ್ಟು ನೀರಿನ ಸಂಗ್ರಹದ ಶಕ್ತಿ ಹೊಂದಿರುವ ಕೆಆರ್‌ಎಸ್‌ನ ಈಗಿನ ನೀರಿನ ಮಟ್ಟ 81.05ಅಡಿಯಷ್ಟಿದೆ.
ಒಳಹರಿವು 573 ಕ್ಯೂಸೆಕ್‌ನಷ್ಟಿದೆ. ಇದೇ ಹೊತ್ತಿನಲ್ಲಿ ಕಳೆದ ವರ್ಷ ಒಳ ಹರಿವು 33,314 ಕ್ಯೂಸೆಕ್‌ನಷ್ಟಿತ್ತು. ನೀರಿನ ಸಂಗ್ರಹ ಸಹ 44.19ಟಿಎಂಸಿಯಷ್ಟಿತ್ತು. ಈ ಸಲ ಇದು ತುಂಬುವ ಲಕ್ಷಣವೇ ಕಾಣುತ್ತಿಲ್ಲ.
ಕಳೆದ 20 ವರ್ಷ ಅವಧಿಯನ್ನು ಅವಲೋಕಿಸಿದರೆ ಪ್ರಸ್ತಕ ಜೂನ್‌ನಲ್ಲಿ ಅತಿ ಕಡಿಮೆ ಒಳಹರಿವು ಇರುವ ದಾಖಲೆ ನಿರ್ಮಾಣವಾಗಿದೆ. ಜೂನ್‌ನಲ್ಲಿ ಕೇವಲ 1.37 ಟಿಎಂಸಿ ಮಾತ್ರ ನೀರು ಕೆಆರ್‌ಎಸ್‌ಗೆ ಹರಿದು ಬಂದಿದ್ದರೆ, ಕಳೆದ ವರ್ಷ 38.4 ಟಿಎಂಸಿಗಿಂತಲೂ ಹೆಚ್ಚಿನ ನೀರು ಹರಿದು ಬಂದಿರುವ ದಾಖಲೆ ನಿರ್ಮಾಣವಾಗಿತ್ತು.
ಕಳೆದ ವರ್ಷ ಜೂನ್ ಆರಂಭದಿಂದಲೇ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿತ್ತು. ಇದರಿಂದ ಜೂನ್ ಅಂತ್ಯದ ವೇಳೆಗೆ ಜಲಾಶಯ ಭರ್ತಿಯಾಗಿ, ಭಾರಿ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿತ್ತು. ಆದರೆ, ಈ ಸಲ ನದಿಯಲ್ಲಿ ಒಳಹರಿವು ಮಾತ್ರವಲ್ಲದೆ, ಜಲಾಶಯದಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ.
ಹಾರಂಗಿಯಲ್ಲಿರುವುದು 2.27 ಟಿಎಂಸಿ ನೀರಷ್ಟೇ
ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಳೆದ ವರ್ಷಕ್ಕಿಂತ ಅರ್ಧದಷ್ಟು ನೀರು ಈ ಸಲ ಇಲ್ಲಿಲ್ಲ. 8.5 ಟಿಎಂಸಿ ನೀರಿನ ಸಾಮರ್ಥ್ಯ ಇದರಲ್ಲಿ ಇದೀಗ 2.27 ಟಿಎಂಸಿ ನೀರಿದೆ. ಕಳೆದ ವರ್ಷ ಈ ಹೊತ್ತಿನಲ್ಲಿ 6.1 ಟಿಎಂಸಿ ನೀರಿತ್ತು.
ಒಳ ಹರಿವು ಸಹ 7,445 ಕ್ಯೂಸೆಕ್‌ವಿತ್ತು. ಇದೀಗ ಇದರ ಒಳಹರಿವು ಕೇವಲ 338 ಕ್ಯೂಸೆಕ್‌ನಷ್ಟಿದೆ. ಇದು ಭರ್ತಿಯಾಗದ ಹೊರತು ಕೆಆರ್‌ಎಸ್ ಒಳಹರಿವು ಹೆಚ್ಚಾಗುವುದಿಲ್ಲ.
ಕುಡಿಯಲಷ್ಟೇ ನೀರು
ಮೈಸೂರು, ಬೆಂಗಳೂರು, 30 ಹಳ್ಳಿಗಳಿಗೆ ಕಬಿನಿ, ಕೆಆರ್‌ಎಸ್ ಜಲಾಶಯದಿಂದ ಪ್ರತಿ ತಿಂಗಳಿಗೆ ಎರಡೂವರೆ ಟಿಎಂಸಿ ನೀರು ಬೇಕು. ಈಗಿರುವ ನೀರು ಮೂರೂವರೆ ತಿಂಗಳಿಗೆ ಆಗಲಿದೆ. ಕಾವೇರಿ ಅಚ್ಚುಕಟ್ಟಿನ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯದಲ್ಲಿ ಸದ್ಯಕ್ಕೆ 24 ಟಿಎಂಸಿ ನೀರು ಸಂಗ್ರಹ ಇದೆ. ಇದು ಕುಡಿಯಲು 9-10 ತಿಂಗಳಿಗೆ ಸಾಕಾಗಾಲಿದೆ. ಈಗಿನ ಸ್ಥಿತಿಯಲ್ಲಿ ಕೃಷಿ ಬೆಳೆಗಳಿಗೆ ನೀರು ಕೊಡಲಾಗಲ್ಲ ಎಂದು ನೀರಾವರಿ ಇಲಾಖೆಯ ಕಬಿನಿ ಮತ್ತು ವರುಣ ವಿಭಾಗದ ಅಧೀಕ್ಷಕ ಇಂಜಿನಿಯರ್ ರಘುಪತಿ ತಿಳಿಸಿದ್ದಾರೆ.
ಜಲಸಂಕಷ್ಟದ ಆತಂಕ
ನಗು, ತಾರಕ ಜಲಾಶಯದಿಂದ ಹರಿದು ಬರುವ ನೀರು ಕಬಿನಿ ಜಲಾಶಯ ತುಂಬಲು ನೆರವಾಗುತ್ತದೆ. ಬಳಿಕ ತಮಿಳುನಾಡಿನ ನೀರಿನ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆ ಮಾಡಲು ಕಬಿನಿ ನೀರನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಜಲಸಂಕಷ್ಟ ಕಾಲದಲ್ಲಿ ಇದುವೇ ರಾಜ್ಯ ಕೈ ಹಿಡಿದಿದೆ. ಆದರೆ, ಈ ಸಲ ಅದುವೇ ಅಸಹಾಯಕವಾಗಿದ್ದು, ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ಕೊಡಲು ಸಾಧ್ಯವಿಲ್ಲದಂತಾಗಿದೆ.
"
ಕುಡಿಯಲು ಮೂರೂವರೆ ತಿಂಗಳಿಗೆ ಸಾಕಾಗುಷ್ಟು ನೀರು ಮಾತ್ರ ಇದೆ. ಇದನ್ನು ಬಿಟ್ಟರೆ ಕೃಷಿ ಸೇರಿದಂತೆ ಅನ್ಯ ಉದ್ದೇಶದ ಬಳಕೆಗೆ ನೀರು ಕೊಡಲು ಸಾಧ್ಯವೇ ಇಲ್ಲ
— ರಘುಪತಿ ಕಬಿನಿ ಮತ್ತು ವರುಣ ವಿಭಾಗದ ಅಧೀಕ್ಷಕ ಇಂಜಿನಿಯರ್