ಕೆ.ಆರ್.ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಸುರೇಂದ್ರ ಮೂರ್ತಿ , ಎಚ್.ಎಲ್.ಶಂಕರಮೂರ್ತಿ, ಸಿದ್ದಪ್ಪ, ಡಿ.ವಿ.ಗುಡಿ ನಂದೀಶ್, ಎಂ.ಎಸ್ ರೇಖಾ ಇತರರು ಇದ್ದರು.
ಕೆ.ಆರ್.ನಗರ: ಬಸವಣ್ಣ ಮತ್ತು ಅಂಬೇಡ್ಕರ್ ಅವರ ಕನಸು ಒಂದೇ ಆಗಿತ್ತು. ಸಮ ಸಮಾಜ ನಿರ್ಮಾಣಕ್ಕಾಗಿ ಈ ಇಬ್ಬರು ಮಹನೀಯರು ನಿರಂತರ ಹೋರಾಟ ಮಾಡಿ ವಿಶ್ವದ ಚರಿತ್ರೆಯಲ್ಲಿ ಅಜರಾಮರರಾಗಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಶ್ರೀ ಕೃಷ್ಣ ರಾಜೇಂದ್ರ ಕ್ರೀಡಾಂಗಣದ ಹಿಂಭಾಗದಲ್ಲಿ 3.83 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮುಖ್ಯಮಂತ್ರಿಗಳು ಸರ್ಕಾರದಿಂದ ಅನುದಾನ ನೀಡಿದ್ದರಿಂದ ಸುಸಜ್ಜಿತವಾದ ನಿಲಯದ ಕಟ್ಟಡ ನಿರ್ಮಾಣ ಮಾಡಲಾಗಿದೆ. ನೂರೈವತ್ತು ವಿದ್ಯಾರ್ಥಿನಿಯರು ಇರುವಂತಹ ಸೌಕರ್ಯ ಕಲ್ಪಿಸಲಾಗಿದೆ ಎಂದರು.
ಸರ್ಕಾರ ಉಚಿತ ವಸತಿ ನಿಲಯ, ಊಟ, ಬಟ್ಟೆ, ಪುಸ್ತಕ, ಪಾಠ ಸೇರಿದಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ಸವಲತ್ತು ಒದಗಿಸುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಂಡ ಕನಸಾದ ಶೈಕ್ಷಣಿಕ ಪ್ರಗತಿ ಸಾಧಿಸಲಿ ಎಂದು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಗುರಿ ಮತ್ತು ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಫಲಿತಾಂಶ ಗಳಿಸಿ. ಉನ್ನತ ಸ್ಥಾನಮಾನಗಳನ್ನು ಪಡೆಯುವ ಮೂಲಕ ಪಾಲಕರು, ಗುರುಗಳು ಹಾಗೂ ತಾಲೂಕಿಗೆ ಕೀರ್ತಿ ತನ್ನಿ. ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಭೀಮ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರಮೂರ್ತಿ ಮಾತನಾಡಿದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮಹೇಶ್ ಕುಮಾರ್, ಎಇಇ ಜೀವನ್, ಎಇ ಚೇತನ್, ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಡಿ.ವಿ.ಗುಡಿ ನಂದೀಶ್, ದಲಿತ ಮುಖಂಡರಾದ ಎಚ್.ಎಸ್.ಸ್ವಾಮಿ, ಗುರು ಸ್ವಾಮಿ, ನಂಜಪ್ಪ, ಗವಿಯಯ್ಯ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಉಮೇಶ್, ನಿಲಯ ಮೇಲ್ವಿಚಾರಕರಾದ , ಎಂ.ಎಸ್ ರೇಖಾ, ಸಿದ್ದರಾಜು ಇ ತರರು ಭಾಗವಹಿಸಿದ್ದರು.