ಹುಣಸೂರು: ಆದಿವಾಸಿಗಳು ರಾಜಕೀಯ ಅಧಿಕಾರ ಗಳಿಸುವ ಮಹತ್ವ ಅರಿತುಕೊಳ್ಳಲು ಆದಿವಾಸಿ ಜನತಾ ಪಾರ್ಲಿಮೆಂಟ್ ಮೊದಲ ವೇದಿಕೆಯಾಗಿದ್ದು, ಹುಣಸೂರಿನಲ್ಲಿ ಆರಂಭಿಸಿರುವ ವೇದಿಕೆಯನ್ನು ದೇಶಾದ್ಯಂತ ವಿಸ್ತರಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಆದಿವಾಸಿ ಸಮನ್ವಯ ಮಂಚ್ ಅಧ್ಯಕ್ಷ ಹಾಗೂ ಗಾಂಧಿವಾದಿ ಅಶೋಕ್ ಚೌಧುರಿ ಅಭಿಪ್ರಾಯಪಟ್ಟರು.
ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಭಾನುವಾರ ಗಿರಿಜನ ಸುರಕ್ಷಾ ವೇದಿಕೆ, ಮಾನವ ಮಂದಿರ ಸಂಸ್ಥೆ ಮತ್ತು ಡೀಡ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಆದಿವಾಸಿಗಳು ಮತ್ತು ರಾಜಕೀಯ ಅಧಿಕಾರ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆದಿವಾಸಿಗಳಿಗೆ ಎಸ್ಟಿ ಮೀಸಲಿನಲ್ಲಿ ಒಳ ಮೀಸಲು ಇಲ್ಲದಿರುವ ಕಾರಣ, ವಿಧಾನಸಭೆ, ಲೋಕಸಭೆಯಲ್ಲಿ ಪ್ರತಿನಿಧಿತ್ವವನ್ನು ಪಡೆಯಲು ಅವಕಾಶಗಳು ಕನಿಷ್ಠ ಪ್ರಮಾಣದಲ್ಲಿವೆ. ಒಳಮೀಸಲಾತಿಗಾಗಿ ನಮ್ಮ ಹೋರಾಟ ಮುಂದುವರೆಯಲೇಬೇಕು. ಜತೆೆಗೆ ಆದಿವಾಸಿಗಳಿಗೆ ರಾಜಕೀಯ ಅಧಿಕಾರದಿಂದ ಆಗುವ ಲಾಭಗಳು, ಸಮುದಾಯದ ಅಭಿವೃದ್ಧಿಯ ಮಹತ್ವಗಳನ್ನು ತಿಳಿಯಲು ಆದಿವಾಸಿ ಜನತಾ ಪಾರ್ಲಿಮೆಂಟ್ ಉತ್ತಮ ವೇದಿಕೆಯಾಗಬಲ್ಲದು. ಅಲ್ಲಿ ಆದಿವಾಸಿಗಳ ಕುರಿತಾಗಿ ವಿಷಯಗಳಮಂಡನೆ, ಅವುಗಳ ಅಗತ್ಯತೆ ಎಲ್ಲವನ್ನು ತಿಳಿದುಕೊಳ್ಳುವ ಮೂಲಕ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗೆಳನ್ನು ಪರಿಹರಿಸಲು ರಾಜಕೀಯ ಪ್ರಾತಿನಿಧಿತ್ವದ ಅವಶ್ಯಕತೆ ಕುರಿತು ಅರಿತುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಹುಣಸೂರಿನಲ್ಲಿ ಕಳೆದ 6-7 ವರ್ಷಗಳಿಂದ ಡೀಡ್ ಸಂಸ್ಥೆ ಪ್ರೇರಣೆಯಲ್ಲಿ ಜನತಾ ಪಾರ್ಲಿಮೆಂಟ್ ರಚಿಸಿ ಸರ್ಕಾರಕ್ಕೆ ತನ್ನ ಹಕ್ಕೊತ್ತಾಯಗಳನ್ನು ಮಂಡಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇದಕ್ಕೆ ಜನತಾ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ ಅಭಿನಂದನಾರ್ಹರು ಎಂದು ಹೇಳಿದರು.
ಸರ್ಕಾರಕ್ಕೆ ಪರ್ಯಾಯವಲ್ಲ: ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಕೈಬಿಟ್ಟು, ಆದಿವಾಸಿ ಪಾರ್ಲಿಮೆಂಟ್ ಸರ್ಕಾರಕ್ಕೆ ಪರ್ಯಾಯವಲ್ಲ. ಬದಲಾಗಿ ನಮ್ಮನ್ನು ನಾವು ಅರಿತುಕೊಳ್ಳುವ ಮತ್ತು ನಮ್ಮ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮುಟ್ಟಿಸಲು ಇರುವ ಮುಖ್ಯ ಸೇತುವೆ ಆಗಬೇಕಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಅವಲಂಬಿತರಾಗಿರುವ 90 ಹಾಡಿಗಳ 5000 ಕುಟುಂಬಗಳಿಗೆ ಅರಣ್ಯ ಹಕ್ಕು ಮಾನ್ಯಮಾಡಿ ಆ ಪ್ರದೇಶವನ್ನು 6ನೇ ಅನುಸೂಚಿತ ಪ್ರದೇಶವೆಂದು ಘೋಷಿಸಲು ಹಾಗೂ ಪ್ರತ್ಯೇಕ ಆದಿವಾಸಿ ಪಂಚಾಯತಿಗಳನ್ನು ಸ್ಥಾಪಿಸಿ ಆದಿವಾಸಿಗಳ ಅಭಿವೃದ್ಧಿ ಮತ್ತು ಅರಣ್ಯ ರಕ್ಷಣೆಗೆ ಮುಂದಾಗಲು ಸರ್ಕಾರದ ಮೇಲೆ ರಾಷ್ಟ್ರೀಯ ಆದಿವಾಸಿ ಸಮನ್ವಯ ಮಂಚ್ ಒತ್ತಾಯಿಸಬೇಕು ಎಂದು ಮನವಿ ಮಾಡಿದರು. ಗಿರಿಜನ ಸುರಕ್ಷಾ ವೇದಿಕೆ ಸಂಚಾಲಕ ಡಾ. ಗಣೇಶ್, ಮಾನವಮಂದಿರದ ಶ್ರೀಕಂಠ ಇತರರು ಇದ್ದರು.