ಮೈಸೂರು ತಾಲೂಕು ಪಂಚಾಯಿತಿ ಹಾಗೂ ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಚಾಮುಂಡಿಬೆಟ್ಟದಲ್ಲಿ ವಿಶೇಷ ಶ್ರಮದಾನ ನಡೆಯಿತು. 
ಮೈಸೂರು

ಶ್ರಮದಾನದ ಮೂಲಕ ಚಾಮುಂಡಿಬೆಟ್ಟದ ಮೆಟ್ಟಿಲುಗಳು ಸ್ವಚ್ಛ

ಪ್ರಮುಖ ಮುಖ್ಯಾಂಶಗಳು

  • ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಯಿಂದ ಜನರಲ್ಲಿ ಜಾಗೃತಿ ಪ್ಲಾಸ್ಟಿಕ್ ಮುಕ್ತ ವಲಯಕ್ಕೆ ಕರೆ
ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ಮೈಸೂರು ತಾಲೂಕು ಪಂಚಾಯಿತಿ ಹಾಗೂ ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ವಿಶೇಷ ಶ್ರಮದಾನ ಕಾರ್ಯಕ್ರಮ ನಡೆಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ನೇತೃತ್ವದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಬೆಟ್ಟದ ಪಾದದಿಂದ ದೇವಾಲಯದವರೆಗೆ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿ, ಪ್ಲಾಸ್ಟಿಕ್ ತ್ಯಾಜ್ಯ, ನೀರಿನ ಬಾಟಲಿ ಸೇರಿದಂತೆ ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು. ಜತೆಗೆ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ ಭಕ್ತರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಸಿ.ಕೃಷ್ಣ ಮಾತನಾಡಿ, ಆಷಾಢ ಮಾಸದಲ್ಲಿ ಸಾವಿರಾರು ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸುವುದರಿಂದ ಪ್ಲಾಸ್ಟಿಕ್ ಬಳಕೆ ತಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ ಕೆ.ರುಕ್ಮಾಂಗದ ಮಾತನಾಡಿ, ಬೆಟ್ಟದ ಸ್ವಚ್ಛತೆ ಮತ್ತು ಪ್ರಕೃತಿ ಸೌಂದರ್ಯ ಕಾಪಾಡಲು ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಚಾಮುಂಡಿಬೆಟ್ಟ ಗ್ರಾ.ಪಂ.ಆಡಳಿತಾಧಿಕಾರಿ ವೈ.ಎನ್.ಮಮತಾ, ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.