ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 
ಮೈಸೂರು

ಉದ್ಯಮಗಳು ಬೇರೆಡೆ ಹೋಗಲು ರಾಜ್ಯ ಸರ್ಕಾರವೇ ಕಾರಣ

ಮೈಸೂರು: ಕರ್ನಾಟಕದಲ್ಲಿ ವ್ಯವಸ್ಥೆಗಳು ಸರಿಯಿಲ್ಲದ ಕಾರಣ ಉದ್ಯಮಗಳು ಬೇರೆ ರಾಜ್ಯಗಳ ಕಡೆಗೆ ಹೋಗುತ್ತಿವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕೇಂದ್ರ ಸರ್ಕಾರದ ಕಾರಣಕ್ಕೆ ಕರ್ನಾಟಕದಿಂದ ಉದ್ಯಮಗಳು ಬೇರೆ ಕಡೆಗೆ ಹೋಗುತ್ತಿವೆ ಎಂಬ ಆರೋಪಕ್ಕೆ ನಗರದಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ಯಾವ ಕಾರಣಕ್ಕೆ ಉದ್ಯಮಗಳು ರಾಜ್ಯದ ಕೈತಪ್ಪುತ್ತಿವೆ ಎಂಬುದನ್ನು ರಾಜ್ಯ ಸರ್ಕಾರ ಯೋಚನೆ ಮಾಡಬೇಕು. ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂರುವುದು ಸರಿಯಲ್ಲ. ಈ ಕುರಿತು ರಾಜ್ಯ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸುಮ್ಮನೆ ರಾಜಕೀಯವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಲ್ಲ ವ್ಯವಸ್ಥೆಗಳು ಸಿಗುತ್ತಿವೆ. ಹೀಗಾಗಿ ಪಕ್ಕದ ರಾಜ್ಯಗಳಿಗೆ ಉದ್ಯಮಗಳು ಹೋಗುತ್ತಿವೆ. ಕರ್ನಾಟಕ ಸರ್ಕಾರ ಯಾವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದೆ ಎಂದು ನೀವೇ ಹೇಳಿ. ಗ್ಯಾರಂಟಿ ಯೋಜನೆ ಬಿಟ್ಟರೆ ಅವರ ಬಾಯಲ್ಲಿ ಇನ್ನೇನೂ ಬರುತ್ತಿಲ್ಲ. ಗುಂಡಿ ಮುಚ್ಚಲು ಸಹ ಸರ್ಕಾರದಲ್ಲಿ ಹಣ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಕೇಂದ್ರ ಚುನಾವಣಾ ಆಯುಕ್ತರನ್ನು ರಾಜಕೀಯ ಪುಢಾರಿ ಎಂಬ ಡಾ.ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಾಂವಿಧಾನಿಕ ಸಂಸ್ಥೆಗಳಲ್ಲಿ ಇರುವವರ ಬಗ್ಗೆ ಗೌರವದಿಂದ ಮಾತನಾಡಬೇಕು. ಅವರ ಸರ್ಕಾರ ಬಂದಿದ್ದು ಕೂಡ ಇದೇ ಚುನಾವಣೆ ವ್ಯವಸ್ಥೆಯಿಂದ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಅವರ ಪಕ್ಷದ ಸರ್ಕಾರ ಬಂದಾಗ ಸರಿ ಎನ್ನುವುದು, ಬರದಿದ್ದಾಗ ತಪ್ಪು ಎನ್ನುವುದು ಎಷ್ಟು ಸರಿ ಎಂಬುದನ್ನು ಅವರೇ ಹೇಳಲಿ. ಯಾರೋ ಒಂದಿಬ್ಬರ ಹೇಳಿಕೆಗಳಿಂದ ಈ ವ್ಯವಸ್ಥೆಗೆ ಅನುಮಾನ ಮೂಡುವುದಿಲ್ಲ. ಅಂತಹ ಅಭಿಪ್ರಾಯಗಳಿಗೆ ಬೆಲೆ ಕೊಡುವುದು ಬೇಡ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರರೇ ವಾಪಸ್ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಸ್ ಕೊಟ್ಟವರ ಒಂದೊಂದೇ ಬಣ್ಣ ಈಗ ಬಯಲಾಗುತ್ತಿದೆ.
ಧರ್ಮಸ್ಥಳದ ಹೆಸರಿಗೆ ಕಪ್ಪು ಮಸಿ ಬಳಿಯಲು ಷಡ್ಯಂತ್ರ ನಡೆದಿತ್ತು ಎಂಬುದು ಮೊದಲಿನಿಂದಲೂ ಗೊತ್ತು. ಈಗ ಕಾನೂನಾತ್ಮಕವಾಗಿ ಅದು ಸಾಬೀತಾಗುತ್ತಿದೆ. ತನಿಖೆ ವೇಳೆ ಆರೋಪಿ ಸೂಚಿಸಿದ್ದ ಸ್ಥಳದಲ್ಲಿ ಯಾವ ಅಸ್ತಿ ಪಂಜರಗಳು ಸಿಗಲಿಲ್ಲ. ಹೀಗಾಗಿ ಕೇಸ್ ವಾಪಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೌಜನ್ಯ ಹತ್ಯೆ ಕೇಸ್ ಬಗ್ಗೆಯೂ ಪೂರ್ಣವಾಗಿ ತನಿಖೆಯಾಗಲಿ. ಎಲ್ಲ ಸತ್ಯಗಳು ಹೊರಬರಲಿ ಎಂದರು.