ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶೈಕ್ಷಣಿಕ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಸರಸ್ವತಿ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಥಾವರ್‌ಚಂದ ಗೆಹಲೋತ್, ಪ್ರೊ.ಶರಣಪ್ಪ ವಿ.ಹಲಸೆ, ಡಾ.ಪ್ರದೀಪ ಭಾರದ್ವಾಜ ಇದ್ದರು.
ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನ ಕೇವಲ ದಾರ್ಶನಿಕ ಉದಾಹರಣೆ ಮಾತ್ರವಾಗಿರದೆ ಭಾರತದ ಆತ್ಮ, ಸಂಸ್ಕೃತಿ, ಯೋಚನೆ ಮತ್ತು ಜೀವನ ಪದ್ಧತಿಯ ಮೂಲಾಧಾರವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ ಗೆಹಲೋತ್ ಹೇಳಿದರು.
ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆರಂಭವಾದ ‘ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಷಯ ಕುರಿತ 3 ದಿನಗಳ ಶೈಕ್ಷಣಿಕ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಮತ್ತು ಜೀವನ ಮೌಲ್ಯಗಳಾಧಾರಿತ ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ ಏಕಾತ್ಮ ಮಾನವ ದರ್ಶನ ಭಾರತೀಯ ಸಂಸ್ಕೃತಿಯ ಜೀವನ ದರ್ಶನವಾಗಿದೆ ಎಂದರು.
ಭಾರತ ದೇಶ ತನ್ನ ಮಹಾನ್ ನಾಗರಿಕತೆ ಮತ್ತು ಸಂಸ್ಕೃತಿಯ ಕಾರಣ ಜಾಗತಿಕ ವೇದಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಕಾಲಕಾಲಕ್ಕೆ ಅನೇಕ ಮಹಾನ್ ವಿಭೂತಿಪುರುಷರು ಭಾರತದಲ್ಲಿ ಅವತರಿಸಿ ಇಲ್ಲಿನ ಪರಂಪರೆಯನ್ನು ಸಮೃದ್ಧಗೊಳಿಸಿದ್ದಾರೆ. ಈ ಮಹಾನ್ ಪುರುಷರ ಮೂಲಕ ಸ್ಥಾಪಿತಗೊಂಡ ಮಹಾನ್ ಪರಂಪರೆಯು ಸಮಾಜ ಮತ್ತು ರಾಷ್ಟ್ರಕ್ಕೆ ಕಾಲಕಾಲಕ್ಕೆ ಪಥದರ್ಶಕದಂತೆ ಕಾರ್ಯನಿರ್ವಹಿಸಿದೆ. ಕುಶಲ ಸಂಘಟಕ, ದಾರ್ಶನಿಕ, ಪ್ರಖರ ವಾಗ್ಮಿ, ಆರ್ಥಿಕ ತಜ್ಞ, ಕಾರ್ಯಕರ್ತ ಪಂಡಿತ್ ದೀನದಯಾಳ್ ಉಪಾಧ್ಯಾಯರು ತಮ್ಮ ಐತಿಹಾಸಿಕ ವ್ಯಾಖ್ಯಾನ ಮಾಲೆಯಲ್ಲಿ ಏಕಾತ್ಮ ಮಾನವದರ್ಶನವೆಂಬ ಸಮಗ್ರದರ್ಶನದ ದೃಷ್ಟಿಕೋನವನ್ನು 60 ವರ್ಷಗಳ ಹಿಂದೆಯೇ ನೀಡಿದ್ದರು. ಅದು ವ್ಯಕ್ತಿ, ಸಮಾಜ ಮತ್ತು ಪ್ರಕೃತಿಯ ನಡುವಿನ ಸಮನ್ವಯದ ಕುರಿತು ತಿಳಿಸುವ ಅದ್ಭುತ ದರ್ಶನವಾಗಿದೆ ಎಂದರು.
ಶರೀರ, ಮನ, ಬುದ್ಧಿ ಮತ್ತು ಆತ್ಮದಿಂದ ಕೂಡಿದ, ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಚತುರ್ವಿಧ ಪುರುಷಾರ್ಥದ ಸಾಧನೆಯನ್ನು ಮಾಡುವ, ಅವರ ಜತೆಗೆ ಕುಟುಂಬ, ಜಾತಿ, ರಾಷ್ಟ್ರವೆಂಬ ಮಾನವ ಸಮಾಜದ ವಿವಿಧ ಏಕಾತ್ಮ ಸಮಷ್ಟಿಯ ಪ್ರತಿನಿಧಿತ ಮಾಡುವ ಕ್ಷಮತೆಯನ್ನು ಇಟ್ಟುಕೊಂಡಿರುವ ಮಾನವ ಈ ದರ್ಶನದ ಕೇಂದ್ರ ಬಿಂದು. ಈ ದರ್ಶನದಲ್ಲಿ ವ್ಯಕ್ತಿ ಸಮಾಜ, ರಾಷ್ಟ್ರ ಮತ್ತು ವಿಶ್ವದ ವಿಕಾಸ ಮತ್ತು ವಿಶ್ವ ಕಲ್ಯಾಣದ ಭಾವವನ್ನು ಮೂಡಿಸಿದ್ದಾರೆ. ಈ ದರ್ಶನದ ಅನುಸಾರ ಸಮಾಜವು ಒಂದು ಜೀವಂತ ಘಟಕ. ಶರೀರದ ಎಲ್ಲ ಅಂಗಗಳು ಸೇರಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ, ಹಾಗೆಯೇ ಸಮಾಜದ ವಿಭಿನ್ನ ವರ್ಗಗಳು ಜತೆಯಾಗಿ ಒಂದು ಸಮಗ್ರ ವ್ಯವಸ್ಥೆಯನ್ನು ಮಾಡುತ್ತದೆ. ಆದ್ದರಿಂದ ಸಮಾಜದ ವಿಕಾಸಕ್ಕೆ ಎಲ್ಲ ವರ್ಗಗಳ ಸಮನ್ವಯ ಮತ್ತು ಸಹಯೋಗ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪಂಡಿತ್ ದೀನದಯಾಳ್ ಉಪಾಧ್ಯಾಯರ ಸಂದೇಶಗಳನ್ನು ಮತ್ತೊಮ್ಮೆ ಆಚರಣೆಗೆ ತಂದು ಸಾಮಾಜಿಕವಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ದೇಶದ ಎಲ್ಲೆಡೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ದೀನದಯಾಳ್ ಉಪಾಧ್ಯಾಯರು ತಮ್ಮ ಅಮೂಲ್ಯ ಕೆಲಸಗಳಿಂದ ಇಂದಿಗೂ ಸ್ಮರಣೀಯ ವ್ಯಕ್ತಿಯಾಗಿದ್ದಾರೆ ಎನ್ನುವ ವಿಷಯಕ್ಕೆ ಭಾರತೀಯರು ಹೆಮ್ಮೆಪಡಬೇಕು ಎಂದರು.
ಅವರು ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ದೇಶಭಕ್ತನಾಗಿ ಪರಿವರ್ತನೆಯಾದರು. ಅಲ್ಲಿಂದ ಸ್ವಯಂಸೇವಕರ ಸಂಘ ಸೇರಿದಂತೆ ಇತರ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದರು. ರಾಷ್ಟ್ರಧರ್ಮ, ಸ್ವದೇಶಿ ಪತ್ರಿಕೆಗಳನ್ನು ಪ್ರಾರಂಭಿಸಿದರು. ಏಕಾತ್ಮ ಮಾನವ ದರ್ಶನವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಅವರಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗಿತ್ತು. ವ್ಯಕ್ತಿ ಎಂದೂ ಒಂಟಿಯಾಗಿರಲು ಸಾಧ್ಯವಿಲ್ಲ. ಸಾಮೂಹಿಕವಾಗಿ ಬದುಕಬೇಕು. ಅದಕ್ಕೆ ಕುಟುಂಬಕ್ಕೆ ಸಮಾಜ, ರಾಷ್ಟ್ರ ಮುಖ್ಯ. ಮನುಷ್ಯ ಇಡೀ ಬ್ರಹ್ಮಾಂಡದ ಅವಿಭಾಜ್ಯ ಎಂದು ಭಾವಿಸಬೇಕು. ಆಗ ಯಾವುದೇ ಸಂಘರ್ಷಗಳು ಇರುವುದಿಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. ಅಂತಹ ಭಾವನೆ ಇಂದು ಎಲ್ಲರಲ್ಲೂ ಜಾಗೃತವಾಗಿದ್ದರೆ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ತಡೆಯಬಹುದಾಗಿದೆ ಎಂದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಜಗತ್ತಿನಲ್ಲಿ ಪ್ರಕೃತಿ ಜತೆಗೆ ನಿರಂತರವಾದ ಸಂಬಂಧವನ್ನು ಬೆಳೆಸಿಕೊಂಡು ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಸ್ಥಳೀಯ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡುವ ಮೂಲಕ ದೇಶೀಯ ಸಂಸ್ಕೃತಿ ಬೆಳೆಸುವುದು, ವಿವಿಧತೆಯಲ್ಲಿನ ಭಿನ್ನತೆಗಳನ್ನು ಹೋಗಲಾಡಿಸಿ ಏಕತೆಗೆ ಸಹಕಾರ ನೀಡುವುದು, ರಾಜಕೀಯದಲ್ಲಿ ತಾಂಡವವಾಡುತ್ತಿರುವ ಸಂಗತಿಗಳಿಗೆ ವಿದಾಯ ಹೇಳಿ ಕ್ಷೇತ್ರದಲ್ಲಿ ಮೌಲ್ಯ ಮೂಡಿಸುವುದು ಈ ಎಲ್ಲವೂ ಏಕಾತ್ಮ ಮಾನವ ದರ್ಶನದ ಮುಖ್ಯ ಅಂಶವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಕಾರ್ಯಕ್ರಮ ಸಂಬಂಧ ಮಾತನಾಡಿದರುವ ವಿಡಿಯೋ ಪ್ರದರ್ಶಿಸಲಾಯಿತು. ‘ದೀನದಯಾಳ್ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನದ 60ನೇ ವರ್ಷದ ನಿಮಿತ್ತ ಆಯೋಜಿಸಿರುವ ಈ ಕಾರ್ಯಕ್ರಮ ಒತ್ತಡ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಧರ್ಮದ ಮೂಲಕ ಜೀವನವನ್ನು ಸಮೃದ್ಧಗೊಳಿಸುವ ಕುರಿತು ತಿಳಿಸುತ್ತದೆ. 2047ರ ವಿಕಸಿತ ಭಾರತ ಕಲ್ಪನೆಯು ದೀನದಯಾಳರ ಏಕಾತ್ಮ ಮಾನವ ದರ್ಶನದ ಆಶಯವನ್ನು ಹೊಂದಿದೆ. ಅದು ಕೇವಲ ಆರ್ಥಿಕ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗಿರದೇ ಸವಾರ್ಂಗೀಣ ವಿಕಾಸವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ಞಾ ಪ್ರವಾಹದ ಕರ್ನಾಟಕ ದಕ್ಷಿಣ ಸಂಯೋಜಕ ಡಾ.ಪ್ರದೀಪ ಭಾರದ್ವಾಜ ಉಪಸ್ಥಿತರಿದ್ದರು.