ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪೋಲಿಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬ ವರ್ಗದವರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಡಾ.ರವೀಂದ್ರ ಚಾಲನೆ ನೀಡಿದರು. ಗಂಗಾಧರ್, ಪ್ರಸನ್ನ, ಚಂದ್ರ ಹಾಸನ್, ಕಿರಣ್ ಇದ್ದರು.
- ಶಸಚಿಕಿತ್ಸೆ ತಜ್ಞ ಡಾ.ರವೀಂದ್ರ ಅಭಿಪ್ರಾಯ
ಎಚ್ ಡಿ ಕೋಟೆ: ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡುವುದು ನಮ್ಮ ಸೌಭಾಗ್ಯ ಎಂದು ಶಸಚಿಕಿತ್ಸೆ ತಜ್ಞ ಡಾ.ರವೀಂದ್ರ ಅಭಿಪ್ರಾಯ ಪಟ್ಟರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ವಿವೇಕಾನಂದ ಸ್ಮಾರಕ ಆಸ್ಪತ್ರೆ ವತಿಯಿಂದ ಪೋಲಿಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಗಲಿರುಳು ಎನ್ನದೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರ ಸೇವೆ ಶ್ಲಾಘನೀಯ ಅಭಿನಂದನಾರ್ಹ ಎಂದರು.
ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಪೊಲೀಸ್ ಸಿಬ್ಬಂದಿ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪೊಲೀಸ್ ಇನ್ ಸ್ಪೆಕ್ಟರ್ ಎಸ್. ಗಂಗಾಧರ್ ಮಾತನಾಡಿ, ಪೋಲಿಸ್ ಇಲಾಖೆ ದಿನದ 24 ಗಂಟೆಯೂ ನಿರಂತರವಾಗಿ ಸಾರ್ವಜನಿಕರ ಸೇವೆ ಮಾಡುತ್ತಿದೆ.ಇದರಿಂದ ಮಾನಸಿಕ ಒತ್ತಡ ಉಂಟಾಗಿ ಹಲವಾರು ಕಾಯಿಲೆಗಳು ನಮಗೆ ಗೊತ್ತಿಲ್ಲದೆ ಬಂದಿರುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಯಾವುದೇ ಹಣ ಐಶ್ವರ್ಯ ಬೇಕಾಗಿಲ್ಲ. ವರ್ಷಕ್ಕೆ ಒಂದು ಬಾರಿಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಾಮಾನ್ಯ ಚಿಕಿತ್ಸೆ ತಜ್ಞರು, ಮೂಳೆ ರೋಗ ತಜ್ಞರು, ಕಣ್ಣಿನ ತಜ್ಞರು, ದಂತ ಚಿಕಿತ್ಸೆ ತಜ್ಞರು, ಶ್ರಾವಣ ತಜ್ಞರು, ಆಯುರ್ವೇದ ತಜ್ಞರು ತಪಾರಣೆ ನಡೆಸಿದರು.
ಸರಗೂರು ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಉಪ ನಿರೀಕ್ಷಕ ಕಿರಣ್, ಅಂತರಸಂತೆ ಪೊಲೀಸ್ ಠಾಣಾ ಉಪ ನಿರೀಕ್ಷಕ ಚಂದ್ರಹಾಸ್ ನಾಯಕ್, ವಿವೇಕಾನಂದ ಸ್ಮಾರಕ ಆಸ್ಪತ್ರೆ ಮುಖ್ಯಸ್ಥರು ರವೀಂದ್ರನಾಥ್, ಸಮುದಾಯ ಸಂಪರ್ಕ ವ್ಯವಸ್ಥಾಪಕ ಬಂಗಾರ ಶೆಟ್ಟಿ, ಸಬ್ ಇನ್ ಸ್ಪೆಕ್ಟರ್ ಚಿಕ್ಕನಾಯಕ, ಪೊಲೀಸ್ ಇಲಾಖೆಯ ಸಿಬ್ಬಂದಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಪೊಲೀಸ್ ಇಲಾಖೆಯ ಕುಟುಂಬಸ್ಥರು ಹಾಜರಿದ್ದರು.