ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಬೆಟ್ಟದಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಂಡ. 
ಮೈಸೂರು

ರಾಷ್ಟ್ರೀಯ ಸ್ವಯಂ ಸೇವಕರ ಸೇವೆ ಶ್ಲಾಘನೀಯ

ಬೆಟ್ಟದಪುರ: ಮಹಾತ್ಮ ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವಲ್ಲಿ ಎನ್‌ಎಸ್‌ಎಸ್ ಘಟಕಗಳಂತಹ ಸ್ವಯಂ ಪ್ರೇರಣಾ ಸಂಘಟನೆಗಳ ಪಾತ್ರ ಶ್ಲಾಘನೀಯ ಎಂದು ಬೆಟ್ಟದಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಹೇಳಿದರು.
ಪಿರಿಯಾಪಟ್ಟಣ ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಬೆಟ್ಟದಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಬಗ್ಗೆ ಪಾಠ ಕಲಿಸುವುದರ ಜತೆಗೆ ಸಾಕಷ್ಟು ವಿಚಾರಗಳನ್ನು ತಿಳಿಸುತ್ತದೆ ಎಂದರು.
ಎಸ್‌ಎಂಎಸ್ ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ವಿ ಮಂಜುನಾಥ್ ಮಾತನಾಡಿ, ಸ್ವಯಂ ಸೇವಕರು ತಮ್ಮ ಶ್ರಮದಾನದ ಜತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಸ್ವಚ್ಛತಾ ಮನೋಭಾವವನ್ನು ಜಾಗೃತಗೊಳಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಎನ್‌ಎಸ್‌ಎಸ್ ಸ್ವಯಂ ಸೇವಕರು ಸಂತೆ ಪ್ರದೇಶದ ಆವರಣ, ಗ್ರಂಥಾಲಯದ ಮುಂಭಾಗ, ಪಂಚಾಯಿತಿ ಆವರಣದಲ್ಲಿದ್ದ ಅನುಪಯುಕ್ತ ಸಸ್ಯಗಳು, ಗಾಜು, ಪ್ಲಾಸ್ಟಿಕ್‌ನಂತಹ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ವಿ.ಛಾಯಾ, ಪ್ರಾಂಶುಪಾಲ ಎಸ್.ಕೆ.ರಾಜ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಯಶವಂತ್ ಕುಮಾರ್, ಸಹ ಕಾರ್ಯಕ್ರಮಾಧಿಕಾರಿಗಳಾದ ಕುಬೇರ್, ಸತೀಶ್, ಪಂಚಾಯಿತಿ ಸಿಬ್ಬಂದಿ ಪಾಂಡು, ಅಣ್ಣೇಗೌಡ , ಶ್ರೀನಿಧಿ, ಉಪನ್ಯಾಸಕರಾದ ಬಸವರಾಜು, ಹರ್ಷಿತಾ, ಶಿವಕುಮಾರ್, ವಸಂತ್, ಸುನೀಲ್, ಪ್ರತಾಪ್, ಅಕ್ಷತಾ, ಸ್ವಯಂ ಸೇವಕರು ಇದ್ದರು.