ದಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಓಂಕರ್‌ಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಜೈನಹಳ್ಳಿ ಸತ್ಯನಾರಾಯಣಗೌಡ, ಡಾ.ಎಂ.ಪುಟ್ಟಸ್ವಾಮಿ, ಡಾ.ಆರ್.ಜಿ.ಉಷಾ,ರಾಜೀವ್ ಶರ್ಮ,ಪ್ರಶಿಕ್ಷಣಾರ್ಥಿಗಳಿದ್ದರು. 
ಮೈಸೂರು

ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು

ಪ್ರಮುಖ ಮುಖ್ಯಾಂಶಗಳು

  • ಜೈನಹಳ್ಳಿ ಸತ್ಯನಾರಾಯಣಗೌಡ ಅಭಿಪ್ರಾಯ
  • ರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರ
ಮೈಸೂರು: ಯಶಸ್ಸು ಪಡೆಯಲು ನಿರಂತರ ಅಭ್ಯಾಸ, ಶಿಸ್ತು, ಆತ್ಮವಿಶ್ವಾಸ ಮತ್ತು ಪರಿಶ್ರಮ ಅಗತ್ಯ ಎಂದು ಕರಾಮುವಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ ಹೇಳಿದರು.
ದಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಓಂಕರ್‌ಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ಕೇವಲ ಉದ್ಯೋಗ ಪಡೆಯಲು ಮಾತ್ರವಲ್ಲ, ವ್ಯಕ್ತಿತ್ವ ವಿಕಸನಕ್ಕೂ ಸಹಾಯಕವಾಗಿವೆ. ಆದ್ದರಿಂದ ಪ್ರತಿ ವಿದ್ಯಾರ್ಥಿಯು ಸ್ಪಷ್ಟ ಗುರಿ ಹೊಂದಿ ನಿರಂತರ ಪ್ರಯತ್ನ ಮಾಡಬೇಕು. ಪರಿಶ್ರಮಕ್ಕೆ ಪರ್ಯಾಯವಿಲ್ಲ. ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಓದಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಮತ್ತು ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು ಬಹಳ ಮುಖ್ಯ ಎಂದರು.
ಸಂಸ್ಥೆ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಲ್ಲದೆ ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳು, ಶಿಕ್ಷಣ ಮನೋವಿಜ್ಞಾನ ಮತ್ತು ಬೋಧನಾ ವಿಧಾನಗಳ ಕುರಿತು ಉತ್ತಮ ಅರಿವು ಹೊಂದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಈ ಎಲ್ಲ ಕ್ಷೇತ್ರಗಳಲ್ಲಿ ಜ್ಞಾನವನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲೆ ಡಾ.ಆರ್.ಜಿ.ಉಷಾ ಮಾತನಾಡಿ, ಇಂದಿನ ಕಾಲದಲ್ಲಿ ಸರ್ಕಾರಿ ಉದ್ಯೋಗ ಹಾಗೂ ವಿವಿಧ ವೃತ್ತಿಪರ ಅವಕಾಶ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳು ಅತ್ಯಂತ ಪ್ರಮುಖವಾಗಿವೆ. 
ಯಶಸ್ಸು ಪಡೆಯಲು ಕೇವಲ ಕಠಿಣ ಪರಿಶ್ರಮ ಸಾಕಾಗುವುದಿಲ್ಲ. ಸರಿಯಾದ ಯೋಜನೆ, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸವೂ ಅಗತ್ಯ. ಜತೆಗೆ ಉತ್ತಮ ಆರೋಗ್ಯ, ನಿದ್ರೆ, ಧನಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸವೂ ಯಶಸ್ಸಿನ ಪ್ರಮುಖ ಅಂಶಗಳಾಗಿವೆ. ಕಷ್ಟಗಳು ಬಂದಾಗ ನಿರಾಶರಾಗದೆ, ಅವುಗಳನ್ನು ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಹಾಯಕ ಪ್ರಾಧ್ಯಾಪಕ ರಾಜೀವ್ ಶರ್ಮ, ಕಾಲೇಜಿನ ಬೋಧಕ ಮತ್ತು ಬೋಧಕೇತರರ ವರ್ಗದವರು ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು.