ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿದರು. 
ಮೈಸೂರು

ದಕ್ಷ ಸ್ಪೋರ್ಟ್ಸ್ ಕಪ್-2026ರ ಎರಡನೇ ಆವೃತ್ತಿಯ ರಾಜ್ಯಮಟ್ಟದ ಅಂತರ ಶಾಲಾ ಕ್ರೀಡಾಕೂಟ ಯಶಸ್ವಿ

ರಾಜ್ಯದ ವಿವಿಧ ಜಿಲ್ಲೆಗಳ 750ಕ್ಕೂ ಹೆಚ್ಚು ವಿದ್ಯಾರ್ಥಿ ಕ್ರೀಡಾಪಟುಗಳು ಭಾಗಿ ಕ್ರೀಡಾಕೂಟ ಉದ್ಘಾಟಿಸಿದ ಡಾ.ಪಿ.ಜಯಚಂದ್ರರಾಜು

ಉತ್ತಮ ಪ್ರದರ್ಶನ ನೀಡಿದ ಹಾಸನದ ದಿವ್ಯ ಜ್ಯೋತಿ ಶಾಲಾ ತಂಡ ದಕ್ಷ ಸ್ಪೋರ್ಟ್ಸ್ ಕಪ್-2026ರ ಎರಡನೇ ಆವೃತ್ತಿಯ ರಾಜ್ಯಮಟ್ಟದ ಅಂತರ ಶಾಲಾ ಕ್ರೀಡಾಕೂಟದ ಬಾಲಕ, ಬಾಲಕಿಯರ ಎರಡೂ ವಿಭಾಗದ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆಯಿತು.

ದಕ್ಷ ಪಿಯು ಕಾಲೇಜು ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 16 ವರ್ಷದೊಳಗಿನವರ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ವಾಲಿಬಾಲ್, ಕಬಡ್ಡಿ ಹಾಗೂ ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್, ಥ್ರೋಬಾಲ್ ಪಂದ್ಯಗಳು ನಡೆದವು.

ಬಾಲಕಿಯರ ವಾಲಿಬಾಲ್‌ನಲ್ಲಿ ಬೆಂಗಳೂರಿನ ಕಾರ್ಮೆಲ್ ಕಾನ್ವೆಂಟ್ ದ್ವಿತೀಯ ಹಾಗೂ ಅರಕಲಗೂಡಿನ ಕೊಂಗಹಳ್ಳಿ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಗಳಿಸಿದವು. ಬಾಲಕಿಯರ ಥ್ರೋಬಾಲ್‌ನಲ್ಲಿ ಬೆಂಗಳೂರಿನ ಕಾರ್ಮೆಲ್ ಕಾನ್ವೆಂಟ್ ಶಾಲೆ ಪ್ರಥಮ, ಮೈಸೂರಿನ ಜಿಎಸ್‌ಎಸ್‌ಎಸ್ ದ್ವಿತೀಯ ಹಾಗೂ ಈಸ್ಟ್ ವೆಸ್ಟ್ ಶಾಲೆ ತೃತೀಯ ಸ್ಥಾನ ಪಡೆದವು.

ಬಾಲಕರ ವಾಲಿಬಾಲ್‌ನಲ್ಲಿಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆ ದ್ವಿತೀಯ ಹಾಗೂ ಜಿಎಸ್‌ಎಸ್‌ಎಸ್ ಶಾಲೆ ತೃತೀಯ ಸ್ಥಾನ ಪಡೆದವು. ಕಬಡ್ಡಿಯಲ್ಲಿ ಶ್ರೀರಂಗಪಟ್ಟಣದ ನ್ಯೂ ಆಕ್ಸ್‌ಫರ್ಡ್ ಶಾಲೆ ಪ್ರಥಮ, ಮೈಸೂರಿನ ಇಲವಾಲ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಹಾಗೂ ಮಂಡ್ಯದ ಸೈಂಟ್ ಥಾಮಸ್ ಶಾಲೆ ತೃತೀಯ ಸ್ಥಾನ ಗಳಿಸಿದವು.

ರಾಜ್ಯದ ವಿವಿಧ ಜಿಲ್ಲೆಗಳ 750ಕ್ಕೂ ಹೆಚ್ಚು ವಿದ್ಯಾರ್ಥಿ ಕ್ರೀಡಾಪಟುಗಳು, 73 ತಂಡಗಳೊಂದಿಗೆ ಪಾಲ್ಗೊಂಡಿದ್ದ ದಕ್ಷ ಸ್ಪೋರ್ಟ್ಸ್ ಕಪ್-2026ರ ಎರಡನೇ ಆವೃತ್ತಿಯ ರಾಜ್ಯಮಟ್ಟದ ಅಂತರ ಶಾಲಾ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.

ಮೈಸೂರು, ಬೆಂಗಳೂರು, ಕೊಡಗು, ಹಾಸನ, ಚಾಮರಾಜನಗರ, ಮಂಡ್ಯ, ಮದ್ದೂರು, ಕನಕಪುರ, ಮಳವಳ್ಳಿ, ಎಚ್.ಡಿ.ಕೋಟೆ, ಅರಸೀಕೆರೆ ಹಾಗೂ ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ಭಾಗಗಳ ತಂಡಗಳು ಭಾಗವಹಿಸಿದ್ದವು.

ಇದಕ್ಕೂ ಮುನ್ನ ಕ್ರೀಡಾಕೂಟಕ್ಕೆ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮಾಜಿ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಹಾಗೂ ದಕ್ಷ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಪಿ.ಜಯಚಂದ್ರರಾಜು ಕ್ರೀಡಾಕೂಟ ಉದ್ಘಾಟಿಸಿದರು.

ದಕ್ಷ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೌತಮ್ ರಾಜು, ಕಾರ್ಯದರ್ಶಿ ಸೋನಿಯಾ ಉಮಾಪತಿ, ದಕ್ಷ ಪದವಿ ಕಾಲೇಜಿನ ನಿರ್ದೇಶಕ ಪಿ.ಹರೀಶ್, ಪ್ರಾಂಶುಪಾಲ ಡಾ.ವಿ.ಸುರೇಶ್, ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ಅಭಿಷೇಕ್ ಹಾಗೂ ಉಪಪ್ರಾಂಶುಪಾಲ ಎಂ.ಡಿ.ಮುಬ್ಬಶೀರ್ ಉಪಸ್ಥಿತರಿದ್ದರು.