ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಪ್ರೊ.ನಿರಂಜನ ವಾನಳ್ಳಿ, ಪ್ರೊ. ಎ.ಪಿ. ಜ್ಞಾನಪ್ರಕಾಶ್, ಡಾ.ಎಸ್.ಮಹೇಶ್ , ಪ್ರೊ.ಎಸ್.ಕೆ. ನವೀನ್‌ಕುಮಾರ್, ಪ್ರೊ.ರಮನಾಥಂ ನಾಯ್ಡು, ಪ್ರೊ.ಸಿ.ಎಸ್. ಆನಂದ್‌ಕುಮಾರ್, ಡಾ.ಎಸ್.ನಿರಂಜನ್‌ರಾಜ್ ಇದ್ದರು.
- ಬದುಕು ನಡೆಸಲು ಹಣ ಬೇಕು, ಅದನ್ನು ಖರ್ಚು ಮಾಡಲು ಸಮಯ ಬೇಕು. ಆದರೆ ಈ ಎರಡೂ ಇದ್ದು ಸ್ವಾತಂತ್ರ್ಯವೇ ಇಲ್ಲದಿದ್ದರೆ ಅವೆರಡೂ ವ್ಯರ್ಥ
- ಆಯಾ ಕ್ಷೇತ್ರದ ಜನರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ಪಾಲಿಸಿದರೆ ಅಷ್ಟೇ ಸಾಕು, ದೇಶ ಸುಭಿಕ್ಷವಾಗಿರುತ್ತದೆ
ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದ ಬಂದ ಸ್ವಾತಂತ್ರ್ಯಕ್ಕೆ ಅದರದೇ ಆದ ಬೆಲೆಯಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನದಲ್ಲಿ ಮಾತನಾಡಿದರು.
ಬದುಕು ನಡೆಸಲು ಹಣ ಬೇಕು, ಅದನ್ನು ಖರ್ಚು ಮಾಡಲು ಸಮಯ ಬೇಕು. ಆದರೆ ಈ ಎರಡೂ ಇದ್ದು ಸ್ವಾತಂತ್ರ್ಯವೇ ಇಲ್ಲದಿದ್ದರೆ ಅವೆರಡೂ ವ್ಯರ್ಥ. ಸ್ವಾತಂತ್ರೃದ ಬೆಲೆ, ಅದನ್ನು ಕಳೆದುಕೊಂಡಾಗಲೇ ತಿಳಿಯುವುದು. ಆದ್ದರಿಂದ ಸ್ವಾತಂತ್ರೃದ ಗೌರವವನ್ನು ಸದಾ ಎತ್ತಿ ಹಿಡಿಯಬೇಕು ಎಂದು ಹೇಳಿದರು.
ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣಕ್ಕೆ ವ್ಯಾಪಾರಕ್ಕೆ ಬಂದ ಬ್ರಿಟಿಷರು ಮುನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮನ್ನು ಆಳಿದರು. ನಂತರ ಹಲವಾರು ಮಹನೀಯರ ತ್ಯಾಗ-ಬಲಿದಾನಗಳ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು, ಇಂದು ನಾವು ಸ್ವತಂತ್ರವಾಗಿ ಬಾಳುವ ಅವಕಾಶ ದೊರೆತಿದೆ. ಆಯಾ ಕ್ಷೇತ್ರದ ಜನರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ಪಾಲಿಸಿದರೆ ಅಷ್ಟೇ ಸಾಕು, ದೇಶ ಸುಭಿಕ್ಷವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕರಾಮವಿ ವ್ಯವಸ್ಥಾಪನ ಮಂಡಳಿ ಸದಸ್ಯ ಡಾ.ಎಸ್.ಮಹೇಶ್ ಮಾತನಾಡಿ, ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವು ಸ್ವಾತಂತ್ರ್ಯ ಪಡೆಯಲು ಏನೆಲ್ಲ ಏಳುಬೀಳುಗಳನ್ನು ಅನುಭವಿಸಬೇಕಾಯಿತು ಎಂಬುದನ್ನು ವಿವರಿಸಿದರು.
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎ.ಪಿ. ಜ್ಞಾನಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ. ಎಸ್.ಕೆ. ನವೀನ್‌ಕುಮಾರ್, ಶೈಕ್ಷಣಿಕ ಡೀನ್ ಪ್ರೊ.ರಮನಾಥಂ ನಾಯ್ಡು, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಸ್. ಆನಂದ್‌ಕುಮಾರ್, ಹಣಕಾಸು ಅಧಿಕಾರಿ ಡಾ. ಎಸ್.ನಿರಂಜನ್‌ರಾಜ್, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸ್ಟುಡಿಯೋ ವಿಭಾಗದ ಸಿದ್ದೇಗೌಡ, ವಿಶ್ವವಿದ್ಯಾನಿಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.