ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ 
ಮೈಸೂರು

ದೇಶದ ಅಭಿವೃದ್ಧಿಗೆ ಯುವಜನ ಪಾತ್ರವೇ ನಿರ್ಣಾಯಕ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅಭಿಮತ
ಮೈಸೂರು: ವಿಜ್ಞಾನ-ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರ್ಥಿಕತೆ, ಹವಾಮಾನ ಬದಲಾವಣೆಯಂತಹ ಸವಾಲುಗಳು ನಮ್ಮಿಂದ ಕೌಶಲ, ವಿವೇಕ ಮತ್ತು ನೈತಿಕ ವಿಧಾನ ಬಯಸುತ್ತವೆ. ಇಂತಹ ಸಂದರ್ಭದಲ್ಲಿ ಯುವಜನರ ಪಾತ್ರವೇ ಇನ್ನಷ್ಟು ನಿರ್ಣಾಯಕವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದರು
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ದೃಢಸಂಕಲ್ಪ ಮಾಡಿರುವ ಯುಗ ಇದು. ಈ ಗುರಿಯನ್ನು ಸಾಧಿಸುವಲ್ಲಿ ಯುವ ಶಕ್ತಿ ಕೊಡುಗೆ ಮುಖ್ಯ ಎಂದರು.
 ನಮ್ಮ ಸಂಸ್ಕೃತಿ ಯಾವಾಗಲೂ ವಿಶ್ವ ಸಹೋದರತ್ವ ಮತ್ತು ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯ ಪ್ರೇರೇಪಿಸುತ್ತದೆ. ಆಧುನಿಕ ಜ್ಞಾನವನ್ನು ಮೌಲ್ಯದೊಂದಿಗೆ ಸಂಯೋಜಿಸುವ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯ ಇದೆ. ಧರ್ಮ ಮತ್ತು ಸಂಸ್ಕೃತಿ ಸಂರಕ್ಷಿಸಲು, ರಾಷ್ಟ್ರೀಯ ಏಕತೆ, ಸಮಗ್ರತೆ ಕಾಪಾಡಿಕೊಳ್ಳಲು, ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಬೆಳೆಸಲು ಮತ್ತು ಜಗತ್ತಿಗೆ ಹೊಸ ದಿಕ್ಕನ್ನು ನೀಡಲು ಸಹಾಯ ಮಾಡುತ್ತದೆ ಎಂದರು. 
ಕರ್ನಾಟಕ ರಾಜ್ಯವು ಜ್ಞಾನ, ನಾವೀನ್ಯತೆ ಮತ್ತು ಉತ್ತಮ ಆಡಳಿತದ ಕ್ಷೇತ್ರಗಳಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ. ಪ್ರಸ್ತುತ ರಾಜ್ಯವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ನವೋದ್ಯಮ, ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. 
ಆತ್ಮವಿಶ್ವಾಸದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವ ಭಾರತ ಮತ್ತು ಕರ್ನಾಟಕವನ್ನು ಯುವಪೀಳಿಗೆ ಪ್ರತಿನಿಧಿಸುತ್ತದೆ. ಈ ಗುರಿಯನ್ನು ಸಾಧಿಸುವಲ್ಲಿ ಜ್ಞಾನ, ಕಠಿಣ ಪರಿಶ್ರಮ ಮತ್ತು ಕರ್ತವ್ಯಪ್ರಜ್ಞೆ ಮುಖ್ಯವಾಗಿದೆ ಎಂದರು.
ಪ್ರಾಚೀನ ಕಾಲದಿಂದಲೂ ಭಾರತವು ಬೌದ್ಧಿಕ ಸಂಪತ್ತು ಹೊಂದಿದೆ. ವೇದಕಾಲದಿಂದ ಇಂದಿನವರೆಗೆ, ಭಾರತೀಯರು ಖಗೋಳಶಾಸ್ತ್ರದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಅಪ್ರತಿಮ ಜ್ಞಾನ ಸಂಗ್ರಹಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ಇಡೀ ಜಗತ್ತಿಗೆ ಮುಖ್ಯವಾಗಿದೆ ಎಂದರು
ವಿದ್ಯಾರ್ಥಿಗಳ ಸಾಧನೆ ಶೈಕ್ಷಣಿಕ ಯಶಸ್ಸು, ಸಂಶೋಧನೆ, ಶಿಸ್ತು ಮತ್ತು ಬೌದ್ಧಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಜ್ಞಾನ-ಪ್ರತಿಭೆಯನ್ನು ವೈಯಕ್ತಿಕ ಪ್ರಗತಿಗೆ ಹಾಗೂ ಸಮಾಜ, ರಾಷ್ಟ್ರ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಬಳಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ವೈಫಲ್ಯಗಳಿಂದ ಹಿಂಜರಿಯಬೇಡಿ. ಅದು ಕಲಿಕೆಯ ಪ್ರಕ್ರಿಯೆಯ ಒಂದು ಹಂತ. ಕಲಿಯುವುದನ್ನು ಮುಂದುವರಿಸಿ ಮತ್ತು ಜ್ಞಾನವನ್ನು ಸಮಾಜದ ಕೊನೆಯ ವ್ಯಕ್ತಿಗೆ ರವಾನಿಸಲು ಶ್ರಮಿಸಿ ಎಂದು ಸಲಹೆ ನೀಡಿದರು.