ಮೈಸೂರು ಲಿಟರರಿ ಫೋರಮ್ ಚಾರಿಟಬಲ್ ಟ್ರಸ್ಟ್ ನಿಂದ ಆಯೋಜಿಸಿದ್ದ ಸಂವಾದಲ್ಲಿ ವಿವಿಧ ಲೇಖಕರು ಭಾಗವಹಿಸಿದ್ದರು. 
ಮೈಸೂರು

ಕತೆ, ಕಾದಂಬರಿ ಬರೆಯಲು ದನ ಮೇಯಿಸುವಾಗ ಓದುತ್ತಿದ್ದ ಕವಿಗಳೇ ಪ್ರೇರಣೆ

ಪ್ರಮುಖ ಮುಖ್ಯಾಂಶಗಳು

  • ಕಲ್ಲು ಕ್ವಾರಿಯಿಂದ ಪೊನ್ನಾಚಿ ಹೊರ ಜಗತ್ತಿಗೆ ತೆರೆದುಕೊಂಡಿದ್ದರೆ, ಇಲ್ಲಿ ಕತೆಗಾರರು ಹುಟ್ಟುತ್ತಿರಲಿಲ್ಲ
  • ದನ-ಕರುಗಳನ್ನು ಮೇಯಿಸಲು ಹೋಗುವಾಗ ಜತೆಗೆ ಪುಸ್ತಕವೊಂದನ್ನು ಕೈಯಲ್ಲಿಡಿದುಕೊಂಡು ಹೋಗುತ್ತಿದ್ದೆವು
ಮೈಸೂರು: ನರಹಂತಹ ವೀರಪ್ಪನ್ ಹಾವಳಿ, ಕಲ್ಲು ಕ್ವಾರಿಯ ಸದ್ದಿನಿಂದಲೇ ಹೊರ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ಮಲೆ ಮಹದೇಶ್ವರಬೆಟ್ಟ ಬಳಿಯ ಪೊನ್ನಾಚಿ ಗ್ರಾಮವನ್ನು ಸಾಹಿತಿ, ಲೇಖಕರ ಮೂಲಕ ಮತ್ತೊಂದು ಮಗ್ಗುಲಲ್ಲಿ ಪರಿಚಯಿಸಲಾಯಿತು.
ಮೈಸೂರು ಲಿಟರರಿ ಫೋರಮ್ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್‌ನಿಂದ ನಗರಲ್ಲಿ ಆಯೋಜಿಸಿದ್ದ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ‘ಪೊನ್ನಾಚಿ ಕತೆಗಾರರೊಂದಿಗಿನ ಸಂವಾದ’ ಬೇರೆ ರೀತಿಯಲ್ಲಿ ಗ್ರಾಮವನ್ನು ಪರಿಚಯಿಸಿತು.
ಗ್ರಾಮದ ಸೋಮಶೇಖರ ಆರ್.ಪೊನ್ನಾಚಿ, ಚೇತನ್ ಪೊನ್ನಾಚಿ, ಮಹದೇವ ಪೊನ್ನಾಚಿ, ಸ್ವಾಮಿ ಪೊನ್ನಾಚಿ, ಪ್ರಕಾಶ್ ಪುಟ್ಟಪ್ಪ, ಪಿ.ಎಚ್.ಶಿವಕುಮಾರ್, ಸತೀಶ್ ಪೊನ್ನಾಚಿ ತಾವು ಬರೆದಿರುವ ಕಥೆ ಮತ್ತು ಕಾದಂಬರಿಗಳ ಹಿನ್ನೆಲೆ ಮತ್ತು ಪ್ರೇರಣೆಯನ್ನು ನೆರೆದಿರುವವರ ಮುಂದೆ ಇರುವ ಮೂಲಕ ಪೊನ್ನಾಚಿ ಸಾಹಿತ್ಯಕವಾಗಿಯೂ ಬೆಳೆದಿದೆ ಎನ್ನುವುದನ್ನು ಸಾಬೀತು ಪಡಿಸಿದರು.
ಸೋಮಶೇಖರ ಆರ್.ಪೊನ್ನಾಚಿ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದ ಸುತ್ತಲಿನ ಮಲೆಗಳಲ್ಲಿರುವ ಪೊನ್ನಾಚಿಗೂ ಇತಿಹಾಸವಿದ್ದು, ‘ಪೊನ್ನು ಮಲೈ’ ಎಂದು ಕರೆಯಲಾಗುತ್ತಿತ್ತು. ನಂತರ ದಿನಗಳಲ್ಲಿ ಅದು ಪೊನ್ನಾಚಿ ಆಗಿದೆ ಎಂದು ಊರಿನ ಇತಿಹಾಸ ತಿಳಿಸಿದರು.
ಸ್ವಾಮಿ ಪೊನ್ನಾಚಿ ಮಾತನಾಡಿ, ಕಲ್ಲು ಕ್ವಾರಿಯಿಂದ ಪೊನ್ನಾಚಿ ಹೊರ ಜಗತ್ತಿಗೆ ತೆರೆದುಕೊಂಡಿದ್ದರೆ, ಇಲ್ಲಿ ಕತೆಗಾರರು ಹುಟ್ಟುತ್ತಿರಲಿಲ್ಲ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವ ಈ ಪ್ರದೇಶದಲ್ಲಿ ದನ-ಕರುಗಳನ್ನು ಮೇಯಿಸಲು ಹೋಗುವಾಗ ಜತೆಗೆ ಪುಸ್ತಕವೊಂದನ್ನು ಕೈಯಲ್ಲಿಡಿದುಕೊಂಡು ಹೋಗುತ್ತಿದ್ದೆವು. ಪುಸ್ತಕ ಓದಿನ ಜತೆಗೆ ಕಾಡುಪ್ರಾಣಿಗಳು ಬಂದರೆ ಅದೇ ಪುಸ್ತಕದಿಂದ ಬೆಂಕಿ ಹಚ್ಚಿ ಅವುಗಳನ್ನು ಹೆಸರಿಸುತ್ತಿದ್ದೆವು ಎಂದು ನೆನಪು ಮಾಡಿಕೊಂಡರು.
ದನ-ಕರುಗಳನ್ನು ಮೇಯಿಸುತ್ತ ಕುವೆಂಪು, ದ.ರಾ.ಬೇಂದ್ರೆಯಂತಹ ಕವಿಗಳ ಪುಸ್ತಕಗಳನ್ನು ಓದಿದ ಪರಿಣಾಮದಿಂದ ನಾವುಗಳು ಕೂಡ ಕತೆ, ಕಾದಂಬರಿಗಳನ್ನು ಬರೆಯಲು ಪ್ರೇರಣೆಯಾಯಿತು ಎಂದು ತಿಳಿಸಿದರು.
ಕಥೆಗಾರ ಅಬ್ದುಲ್ ರಶೀದ್ ಮಾತನಾಡಿ, ಸಾಹಿತ್ಯ ಎಂದರೆ ಅಂತಾರಾಷ್ಟ್ರೀಯ ವಿಷಯವಲ್ಲ. ಅದು ಒಣಿ, ಮಾರಮ್ಮನ ಗುಡಿ, ಬೆಟ್ಟದಲ್ಲಿ ದೊಡ್ಡ ಸಾಹಿತ್ಯ ಕೃತಿಗಳು ಬರುತ್ತವೆ ಎನ್ನುವುದಕ್ಕೆ ಪೊನ್ನಾಚಿ ಗ್ರಾಮವೂ ಸಾಕ್ಷಿ ಎಂದರು.