- ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕಳವಳ
- ಮೈವಿವಿ ಪಿಂಚಣಿ ಸಮಸ್ಯೆಗೆ ಶಾಶ್ವತ ಪರಿಹಾರ
ನಗರದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ 106ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹಿರಿಮೆ ಹೊಂದಿರುವ ಮೈವಿವಿ, ಹಾಸನ, ಮಂಡ್ಯ, ಚಾಮರಾಜನಗರದಲ್ಲಿ ಹೊಸ ವಿಶ್ವವಿದ್ಯಾಲಯ ಮಾಡುವ ಮೂಲಕ ಹರಿದು ಹಂಚಿಹೋಗಿದೆ. ಜತೆಗೆ, ಪಾಶ್ಚಿಮಾತ್ಯ ಅನುಕರಣೆ, ವಿವಿ ಸ್ಥಿತಿಗತಿ, ಶುಲ್ಕ ಸಂಗ್ರಹ ಸೇರಿದಂತೆ ವಿವಿಧ ಸಂಗತಿಗಳನ್ನು ಯಾವುದನ್ನೂ ಗಮನಿಸದೆ, ಕೇವಲ ಪ್ರಚಾರ ಮತ್ತು ಭಾವನೆ ಆಧಾರದಲ್ಲಿ ಹೊಸ ವಿಶ್ವವಿದ್ಯಾಲಯ ರಚನೆ ಮಾಡಲಾಗಿದೆ ಎಂದು ಹಿಂದಿನ ಬಿಜೆಪಿ ಸರ್ಕಾರದ ಕ್ರಮದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
150 ಕೋಟಿ ರೂ. ಪಿಂಚಣಿ ವೆಚ್ಚದ ಹೊರೆ ಮೈವಿವಿ ಮೇಲೆ ಬಿದ್ದಿದೆ. ಸಂಯೋಜಿತ ಕಾಲೇಜುಗಳ ಸಂಖ್ಯೆ 100ಕ್ಕಿಂತ ಕೆಳಗಿಳಿದಿದೆ. ದೇಶದಲ್ಲೇ ದೊಡ್ಡ ವಿವಿಯಾಗಿದ್ದ ಬೆಂಗಳೂರು ವಿವಿಯನ್ನು ನಾಲ್ಕು ಭಾಗವಾಗಿ ವಿಭಜನೆ ಮಾಡಿದರೂ ಅಲ್ಲಿ ಇಂತಹ ದುಸ್ಥಿತಿ ನಿರ್ಮಾಣವಾಗಿಲ್ಲ.
ಇಲ್ಲಿ ಏಕೆ ಹೀಗೆ ಆಯಿತು? ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಮೈವಿವಿ ಇರಬೇಕಿತ್ತು. ಆದರೆ, ಇದು ಸಾಧ್ಯವಾಗಿಲ್ಲ. ಈ ಕುರಿತು ಇದೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಆರ್ಥಿಕ ಸಂಕಷ್ಟಕ್ಕೆ ಮೈಸೂರು ವಿವಿಯೊಂದಿಗೆ ಧಾರವಾಡದ ಕರ್ನಾಟಕ ವಿವಿ, ಮಂಗಳೂರು ವಿವಿ, ಇದೀಗ ಶಿವಮೊಗ್ಗದ ಕುವೆಂಪು ವಿವಿ ಸಹ ಸೇರ್ಪಡೆಗೊಂಡಿದೆ. ಸಾರ್ವಜನಿಕ ವಿವಿಗಳು ಯಾರಿಗೆ ಸೇವೆ ಕೊಡುತ್ತಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ಮೈವಿವಿ ಪಿಂಚಣಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ವಿವಿ ಉಳಿಸಲು ಸಹ ಸರ್ಕಾರ ಸಕಾರಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಿದೆ. ಇದಕ್ಕೆ ಬೆಂಬಲ ಕೊಡಬೇಕು ಎಂದು ಕೋರಿದರು.