ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪ್ರೊ.ಶರಣಪ್ಪ ವಿ.ಹಲಸೆ, ಕಲ್ಯಾಣ್ ಕುಮಾರ್, ಎ.ದೇವರಾಜು, ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.
- ಬ್ಯಾಂಕ್‌ಗಳಲ್ಲಿ ಉತ್ತರ ಭಾರತದವರೇ ಹೆಚ್ಚು
- ವಿದ್ಯಾರ್ಥಿ ಜೀವನದಲ್ಲಿ 15 ವರ್ಷ ಓದಿದವರು ಕೇವಲ 6 ತಿಂಗಳು ಛಲಬಿಡದೆ ನಿರಂತರ ಅಧ್ಯಯನ ಮಾಡಿ
- ಯಶಸ್ಸಿನಲ್ಲಿ ಬೇರೆಯವರ ಯೋಚನೆ ಬೇಡ
ಮೈಸೂರು: ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವು ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಯ್ಕೆಗೆ ದೇಶದಲ್ಲೇ ಹೆಸರಾಗಿದೆ. ಸರ್ಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯು ಹಲವಾರು ವಿವಾದಗಳಿಗೆ ಒಳಗಾಗಿ ನಾಲ್ಕೈದು ವರ್ಷಗಳು ಹಿಡಿಯುತ್ತಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕಲ್ಯಾಣ್ ಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಇತ್ತೀಚೆಗೆ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 50 ದಿನಗಳ ಕಾಲ ಆಯೋಜಿಸಿರುವ ತರಬೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ಬಹುತೇಕ ಬ್ಯಾಂಕ್‌ಗಳಲ್ಲಿ ಉತ್ತರ ಭಾರತದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ನಮ್ಮ ಕನ್ನಡಿಗರಲ್ಲಿ ಈ ಕುರಿತು ತಿಳಿವಳಿಕೆ ಇಲ್ಲ. ಬ್ಯಾಂಕ್ ಪರೀಕ್ಷೆಗಳು ಕಷ್ಟ ಎನ್ನುವ ತಪ್ಪು ಮನೋಭಾವ ಇದಕ್ಕೆ ಕಾರಣ. ಇತ್ತೀಚೆಗೆ ಕರ್ನಾಟಕ ಸರ್ಕಾರ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಕೇಂದ್ರದ ಮೇಲೆ ಒತ್ತಡ ಹೇರಿ ಸಫಲರಾಗಿರುವುದು ಸ್ವಾಗತಾರ್ಹ ಎಂದರು.
ವಿದ್ಯಾರ್ಥಿ ಜೀವನದಲ್ಲಿ 15 ವರ್ಷ ಓದಿದವರು ಕೇವಲ 6 ತಿಂಗಳು ಛಲಬಿಡದೆ ನಿರಂತರ ಅಧ್ಯಯನ ಮಾಡಿದರೆ, ನಿಮ್ಮ ಜೀವನ ಕಟ್ಟಿಕೊಳ್ಳುವುದಲ್ಲದೆ ನಿಮ್ಮ ಮನೆ ಮಂದಿ ಮತ್ತು ನಂಬಿದವರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಬಹುದು. ಆದರೆ, ಇಂದಿನ ಪಾಲಕರು ಮಕ್ಕಳಿಗೆ ಕಷ್ಟಗಳನ್ನು ತೋರಿಸಿ ಬೆಳೆಸಿದರೆ ಮಾತ್ರ ಅವರ ಅಭಿವೃದ್ಧಿ ಸಾಧ್ಯ. ಆದರೆ ಇಂದಿನ ಪಾಲಕರು ಇದನ್ನು ಮಾಡುತ್ತಿಲ್ಲ. ಹೀಗಾಗಿ ಯುವ ಸಮುದಾಯ ದಾರಿ ತಪ್ಪುತ್ತಿದೆ. ಹುದ್ದೆಗಳು ಕಡಿಮೆ ಇದೆ ಅರ್ಜಿಗಳು ಹೆಚ್ಚಿವೆ ಎಂದು ಗಾಬರಿಪಡದೆ ಕೇವಲ ಒಂದೇ ಹುದ್ದೆ ಇದ್ದರೂ ಪ್ರಯತ್ನಪಡಬೇಕು ಎನ್ನುವ ಛಲ ನಿಮ್ಮದಾಗಿದೆ. ಕೂಡು, ಕಳೆ, ಗುಣಿಸು, ಬಾಗಿಸು ಇಷ್ಟೆ ಬ್ಯಾಂಕಿಂಗ್ ವಿಷಯ ಎಂದು ಹೇಳಿದರು.
ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಮಾತನಾಡಿ, ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗೆ ನೀವು ಸೇರಿದರೆ ಅರ್ಧ ಯಶಸ್ಸು ಪಡೆದಂತೆಯೇ. ಅಸಂಖ್ಯಾತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಜೀವನ ರೂಪಿಸಿಕೊಂಡಿದ್ದಾರೆ ಎಂದರು.
ಸಿದ್ಧತೆಯ ಹಾದಿ ಜಟಿಲವಿದ್ದರು ಗುರಿ ತಲುಪಬೇಕು. ಯಶಸ್ಸಿನಲ್ಲಿ ಬೇರೆಯವರ ಯೋಚನೆ ಬೇಡ. ಒಂದು ಲಕ್ಷ ಮಂದಿ ಪರೀಕ್ಷೆ ಬರೆದು ನೂರು ಜನ ಆಯ್ಕೆಯಾಗುತ್ತಾರೆ ಎಂದರೆ ಅವರ ಶ್ರಮ ನಿರಂತರವಿರುತ್ತದೆ. ನಿಮ್ಮ ಪಠ್ಯಕ್ರಮವನ್ನು ಪುನಃ ಪುನಃ ತಿರುವಿಹಾಕುತ್ತಿರಿ. ಸಮಯದ ನಿರ್ವಹಣೆ ಇರಲಿ. ಪರೀಕ್ಷಾ ಕೇಂದ್ರದಲ್ಲಿ ಕುಳಿತು ಯೋಚಿಸುವುದು ಕೂಡ ಸಮಯದ ವ್ಯತ್ಯವೇ ಆಗುತ್ತದೆ. ಕಲ್ಪಿತ ಪರೀಕ್ಷೆಗೆ ಭಾಗವಹಿಸಿ ಯಶಸ್ಸು ಗಳಿಸುವವರೆಗೂ ಸಿದ್ಧತೆ ನಿರಂತರವಿರಬೇಕು. ನಿರಂತರ ಪ್ರಯತ್ನ ಮಾತ್ರ ನಿಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರಗಳ ಹುದ್ದೆಗಳು ಸಮಾಜದಲ್ಲಿ ಒಳ್ಳೆಯ ಗೌರವ ಮತ್ತು ಘನತೆಯನ್ನು ತಂದು ಕೊಡುತ್ತವೆ. ದೊಡ್ಡ ಗುರಿಯನ್ನು ಹೊಂದಿ ಅಧ್ಯಯನ ಮಾಡಿ ವಿಶ್ವವಿದ್ಯಾಲಯಕ್ಕೆ ಗೌರವ ತನ್ನಿ ಎಂದು ಶುಭಕೋರಿದರು.
ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು, ಕೆ.ಜಿ. ಕೊಪ್ಪಲ್ ಗಣೇಶ್, ಸಹಾಯಕ ಪ್ರಾಧ್ಯಾಪಕ ಡಾ. ಬೀರಪ್ಪ, ಡಾ. ನಾಗೇಶ್, ಸ್ಟುಡಿಯೋ ನಿರ್ದೇಶಕ ಸಿದ್ದೇಗೌಡ ಇದ್ದರು.