ಗೋಪಾಲಸ್ವಾಮಿ ಪಿಯು ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಡಾ.ಸಿಪಿಕೆ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ.ಪ್ರಭುಸ್ವಾಮಿ ಕಟ್ನವಾಡಿ, ಅಂಶಿ ಪ್ರಸನ್ನಕುಮಾರ್, ಡಿ.ಎನ್. ಕೃಷ್ಣಮೂರ್ತಿ ಇದ್ದರು. 
ಮೈಸೂರು

ಬಹುಮಾಧ್ಯಮಗಳಲ್ಲಿ ಅಶ್ಲೀಲದ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ವಿಷಾದ
  • ದೇಶಪ್ರೇಮದ ಸದಭಿರುಚಿ ಕೂಡ ಕಡಿಮೆ
ಮೈಸೂರು: ಪ್ರಸ್ತುತ ಬಹುಮಾಧ್ಯಮಗಳಲ್ಲಿ ಅಶ್ಲೀಲದ ಮೆರವಣಿಗೆ ನಡೆಯುತ್ತಿದೆ. ಇತ್ತೀಚೆಗೆ ಸದಭಿರುಚಿ ಇಳಿಮುಖವಾಗುತ್ತಿದೆ. ದೇಶಪ್ರೇಮ ಕೂಡ ಕ್ಷೀಣಿಸುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ವಿಷಾದಿಸಿದರು.
ಸ್ವಜನ್ಯ ಕಲಾವೇದಿಕೆ, ಭಾಗೀರಥಿ ಪ್ರಕಾಶನ, ಶ್ರೀ ಶಾರದಾ ಪ್ರಕಾಶನ ಸಹಯೋಗದಲ್ಲಿ ನಂಜುಮಳಿಗೆ ಬಳಿಯ ಗೋಪಾಲಸ್ವಾಮಿ ಪಿಯು ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಶಂಕರನಾರಾಯಣ ಅವರ ‘ಪುರುಷಾರ್ಥ’ ಕಾದಂಬರಿ ಹಾಗೂ ಎಸ್.ಶಿಶಿರಂಜನ್  ಅವರ ‘ಇದೆಂಥಾ ದೇಶ ಪ್ರೇಮ ರೀ?!’ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು
ಆದರೆ ಇವೆರಡು ಕೃತಿಯಲ್ಲಿ ಸಂಸ್ಕೃತಿಪೂರ್ಣ ಹಾಗೂ ಸದಭಿರುಚಿಯ, ಶೀಲಸಂಪದ ಕೃತಿಗಳಾಗಿವೆ. ಪ್ರಕೃತಿ, ಗ್ರಾಮೀಣ ಸಂಸ್ಕೃತಿ ಇದೆಯೇ ಹೊರತು ವಿಕೃತಿ ಇಲ್ಲ ಎಂದರು.
ನಾಟಕ ಮತ್ತು ಕಾದಂಬರಿಯ ನಡುವೆ ನಿಕಟ ಸಂಬಂಧವಿದೆ ಎಂದ ಅವರು ಸಾಹಿತ್ಯ ಕೃತಿಗಳು ಸಂತೋಷ ಮತ್ತು ಸಂದೇಶ ಕೊಡುವಂತಿರಬೇಕು ಎಂದು ಅವರು ಹೇಳಿದರು.
ಕೃತಿಗಳನ್ನು ಬಿಡುಗಡೆ ಮಾಡಿದ ವಿದ್ವಾಂಸ ಡಾ.ಕೆ. ಅನಂತರಾಮು ಮಾತನಾಡಿ, ಪ್ರಸ್ತುತ ದೇಶ ಪ್ರೇಮದ ಕೊರತೆ ಕಾಡುತ್ತಿದೆ. ಎಲ್ಲ ಸಮಸ್ಯೆಗಳಿಗೂ ಇದೇ ಕಾರಣವಾಗಿದೆ. ದೇಹಕ್ಕೆ ವಿಟಮಿನ್‌ಗಳ ಕೊರತೆಯಿಂದ ವಿವಿಧ ರೋಗಗಳು ಬರುವಂತೆ ದೇಶಪ್ರೇಮ, ದೇಶಭಕ್ತಿಯ ವಿಟಮಿನ್ ಕೊರತೆ ಕಾಡುತ್ತಿದೆ ಎಂದರು.
ಕೆಲವು ಕೃತಿಗಳನ್ನು ಕೈತೊಳೆದು ಮುಟ್ಟಬೇಕು. ಇನ್ನೂ ಕೆಲವುಗಳನ್ನು ಮುಟ್ಟಿದ ನಂತರ ಕೈತೊಳೆಯಬೇಕು. ಇವತ್ತು ಬಿಡುಗಡೆಯಾದ ಎರಡೂ ಕೃತಿಗಳು ಕೈತೊಳೆದು ಮುಟ್ಟುವಂಥವು. ಇವು ನವೋದಯ ಯುಗದ ಭಾವದಂತಿವೆ ಎಂದರು.
ಪುರುಷಾರ್ಥ ಕಾದಂಬರಿ ಕುರಿತು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್  ಮಾತನಾಡಿ, ಇತ್ತೀಚೆಗೆ ಮನೆಯವರೆಲ್ಲ ಒಟ್ಟಿಗೆ ಕುಳಿತು ಟಿವಿ ನೋಡಲಾಗದ ರೀತಿಯಲ್ಲಿ ಧಾರಾವಾಹಿಗಳು ಪ್ರಸಾರವಾಗುತ್ತಿವೆ ಎಂದು ವಿಷಾದಿಸಿದರು.
ಈ ಕಾದಂಬರಿಯ ಆಂತರಿಕ ಚೌಕಟ್ಟು ಚೆನ್ನಾಗಿದೆ. ಯಾವುದೇ ಗರಂ ಗರಂ ಮಸಾಲೆ ಹಾಕಿಲ್ಲ. ಟಿವಿ ಧಾರಾವಾಹಿಗಳಂತೆ ಖಳನಾಯಕ, ನಾಯಕಿಯರಿಲ್ಲ.  ಇಡೀ ಕಾದಂಬರಿ ಮನಸ್ಸಿಗೆ ಮುದ ನೀಡುವಂತಿದೆ. ಶೃಂಗಾರವಿದೆ. ಆದರೆ ಅಶ್ಲೀಲತೆ ಇಲ್ಲ. ಪರಿಶುದ್ಧ ಪ್ರೀತಿಯ, ಸದಭಿರುಚಿಯ ಕಾದಂಬರಿ ಇದಾಗಿದೆ ಎಂದರು.
ಸಾಹಿತ್ಯ ಜೀವನಕ್ಕೆ ಸಂಜೀವಿನಿ ಆಗಬೇಕು. 39 ಅಧ್ಯಾಯಗಳ, 50 ಪಾತ್ರಗಳ ಈ ಕಾದಂಬರಿ ಹಲವಾರು ರೋಚಕತೆಯಿಂದ ಕೂಡಿದೆ ಎಂದು ಅವರು ಹೇಳಿದರು.
‘ಇದೆಂಥಾ ದೇಶಪ್ರೇಮ ರೀ?!’ ಕೃತಿ ಕುರಿತು ಸಹ ಪ್ರಾಧ್ಯಾಪಕ ಡಾ.ಪ್ರಭುಸ್ವಾಮಿ ಕಟ್ನವಾಡಿ ಮಾತನಾಡಿ, ಎಲ್ಲ ನಾಟಕ ಕೃತಿಗಳನ್ನು ರಂಗದ ಮೇಲೆ ತರಲು ಸಾಧ್ಯವಾಗುವುದಿಲ್ಲ. ಆದರೆ, ಈ ನಾಟಕ ರಂಗಕ್ಕೆ ಹೇಳಿಮಾಡಿಸಿದಂತಿದೆ. ಇದರಿಂದಾಗಿಯೇ ಈಗಾಗಲೇ 50 ಪ್ರದರ್ಶನಗಳಾಗಿವೆ ಎಂದು ಮೆಚ್ಚುಗೆ ಸೂಚಿಸಿದರು.
ಹಿರಿಯರು ತ್ಯಾಗ- ಬಲಿದಾನದಿಂದ ಗಳಿಸಿಕೊಟ್ಟ ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ. ಮಕ್ಕಳಿಗೆ ಅದರ ಮೌಲ್ಯ ತಿಳಿಸಬೇಕು ಎಂದರು
ಕಾದಂಬರಿಕಾರ ಶಂಕರನಾರಾಯಣ ಮಾತನಾಡಿ, 1974ರಲ್ಲಿ ಹೊಳೆದ ಈ ಕಾದಂಬರಿಯ ವಸ್ತುವನ್ನು ಕೋವಿಡ್ ಸಂದರ್ಭದಲ್ಲಿ ಪೂರ್ಣಗೊಳಿಸಿ, ಇದೀಗ ಬಿಡುಗಡೆಗೊಳಿಸುತ್ತಿರುವುದಾಗಿ ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮಹಾರಾಜ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್. ಮುರಳಿ, ಕಾದಂಬರಿಕಾರ ಡಿ.ಎನ್. ಕೃಷ್ಣಮೂರ್ತಿ ಇನ್ನಿತರರಿದ್ದರು