ಮೈಸೂರು ಹಳೇ ಡಿಸಿ ಕಚೇರಿ 
ಮೈಸೂರು

ಪಾಳು ಕೊಂಪೆಯಾದ ಮೈಸೂರು ಹಳೇ ಡಿಸಿ ಕಚೇರಿ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದ ಪಾರಂಪರಿಕ ಕಟ್ಟಡ
  • ಶತಮಾನ ಪೂರೈಸಿರುವ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಕಟ್ಟಡ ಧೂಳುಮಯವಾಗಿ
  • ಪಾರಂಪರಿಕ ಕಟ್ಟಡಗಳ ನಿರ್ವಹಣೆಗೆ ತಾತ್ಸಾರ
ವಿಜಯವಾಣಿ ವಿಶೇಷ ಮೈಸೂರು
ಜಿಲ್ಲೆಯ ಶಕ್ತಿಕೇಂದ್ರವಾಗಿ ಹಲವಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಪಾರಂಪರಿಕ ಹಳೇ ಜಿಲ್ಲಾಧಿಕಾರಿ ಕಚೇರಿ ಈಗ ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಂತಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದ ಪಾರಂಪರಿಕ ಕಟ್ಟಡ ಇದಾಗಿದ್ದು, ಶತಮಾನ ಪೂರೈಸಿರುವ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಕಟ್ಟಡ ಧೂಳುಮಯವಾಗಿ ಸೊರಗುತ್ತಿದೆ. ಈಗಾಗಲೇ ಪಾರಂಪರಿಕವಾಗಿ ಗುರುತಿಸಿಕೊಂಡಿದ್ದ ದೇವರಾಜ ಮಾರುಕಟ್ಟೆ, ವಾಣಿ ವಿಲಾಸ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡದ ಸಾಲಿಗೆ ಈ ಪಾರಂಪರಿಕ ಕಟ್ಟಡವೂ ಸೇರ್ಪಡೆಯಾಗಲಿದೆ ಎನ್ನುವ ಅನುಮಾನ ಪಾರಂಪರಿಕ ಕಾಳಜಿಯುಳ್ಳವರಲ್ಲಿ ಮೂಡಿದೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಜನಸಂಪರ್ಕ ಹಾಗೂ ಇಲಾಖೆಗಳಿಗೆ ಸ್ಥಳಾವಕಾಶ ಕೊರತೆ ಉಂಟಾಗಿದ್ದರಿಂದ ಸಿದ್ದಾರ್ಥನಗರದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಿಸಿ, ಅಲ್ಲಿಗೆ ಕಚೇರಿಯನ್ನು ಸ್ಥಳಾಂತರಿಸಲಾಯಿತು. ಬಳಿಕ ಹಳೇ ಕಚೇರಿ ಇದ್ದ ಪಾರಂಪರಿಕ ಶೈಲಿಯ ಕಟ್ಟಡವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿತ್ತು. 
ಆದರೆ ನೂತನ ಕಚೇರಿಗೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡು ಮೂರು ವರ್ಷಗಳೇ ಕಳೆದರೂ ಹಳೇ ಕಟ್ಟಡವನ್ನು ಸೂಕ್ತವಾಗಿ ಬಳಸಿಕೊಳ್ಳದೆ ಪಾಳು ಬಿಡಲಾಗಿದೆ. ಇದರಿಂದಾಗಿ ಅಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ.
ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದಾರ್ಥನಗರದ ನೂತನ ಜಿಲ್ಲಾಧಿಕಾರಿ ಕಚೇರಿಗೆ 2016ರಲ್ಲಿ ಭೂಮಿಪೂಜೆ ನೆರವೇರಿಸಿದ್ದರು. 84.66 ಕೋಟಿ ರೂ. ವೆಚ್ಚದಲ್ಲಿ 2018 ರಲ್ಲಿ ಕಟ್ಟಡ ನಿರ್ಮಾಣಗೊಂಡಿತ್ತು. ನೂತನ ಕಟ್ಟಡ ಉದ್ಘಾಟನೆಗೊಂಡು 5 ವರ್ಷ ಕಳೆದ ಬಳಿಕ 2023 ರಲ್ಲಿ ಹೊಸ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಿತ್ತು. ಆದರೆ ಅಂದಿನಿಂದ ಹಳೆಯ ಕಚೇರಿವನ್ನು ಸರಿಯಾಗಿ ನಿರ್ವಹಣೆ ಮಾಡದೆ ಕಟ್ಟಡ ಖಾಲಿಯಾಗಿಯೇ ಉಳಿದಿದೆ.
130 ವರ್ಷ ಹಳೆಯ ಪಾರಂಪರಿಕ ಕಟ್ಟಡ 
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಆಡಳಿತದ ದೃಷ್ಟಿಯಿಂದ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ 1895ರಲ್ಲಿ ಇಂಡೋ-ಸಾರ್ಸೆನಿಕ್ ಮತ್ತು ಇಂಡೋ ಇಸ್ಲಾಮಿಕ್ ವಾಸ್ತುಶಿಲ್ಪದ ಶೈಲಿಯಲ್ಲಿ ಈ ಕಚೇರಿಯನ್ನು ನಿರ್ಮಿಸಲಾಯಿತು. 
ಅಠಾರ (ಸಾರ್ವಜನಿಕ ಕಚೇರಿ ಕಟ್ಟಡ) ಕಚೇರಿಯಾಗಿ ಬಳಕೆ ಆಗುತ್ತಿದ್ದ ಕಟ್ಟಡವನ್ನು ಸ್ವಾತಂತ್ರೃ ಬಳಿಕ ಜಿಲ್ಲಾಧಿಕಾರಿ ಕಚೇರಿಯನ್ನಾಗಿ ಮಾರ್ಪಡು ಮಾಡಲಾಯಿತು. ಅಂದಿನಿಂದ ಹಲವಾರು ಜಿಲ್ಲಾಧಿಕಾರಿಗಳನ್ನು ಕಂಡಿದ್ದ ಪಾರಂಪರಿಕ ಕಟ್ಟಡ, ಸಾಕಷ್ಟು ಮಹತ್ವದ ಆಡಳಿತ ನಿರ್ಣಯಕ್ಕೆ ಸಾಕ್ಷಿಯಾಗಿತ್ತು.
ಆಡಳಿತ ಸುಧಾರಣೆ, ಇಲಾಖೆಗಳಿಗೆ ಜಾಗ ಒದಗಿಸಲು, ಜನರಿಗೆ ಹೆಚ್ಚಿನ ಸೌಲಭ್ಯ ನೀಡಬೇಕು ಎನ್ನುವ ಉದ್ದೇಶದಿಂದ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲಾಯಿತು. ಸಿದ್ದಾರ್ಥನಗರದ ನೂತನ ಕಚೇರಿಗೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡ ಬಳಿಕ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಕಚೇರಿಗಳನ್ನು ನೂತನ ಸಂಕೀರ್ಣಕ್ಕೆ ಸ್ಥಳಾಂತರಿಸಲಾಯಿತು. 
ಬಳಿಕ ಖಾಲಿಯಾದ ಪಾರಂಪರಿಕ ಹಳೆಯ ಕಟ್ಟಡಕ್ಕೆ ಸ್ಪರ್ಶ ನೀಡಿ ಸಂರಕ್ಷಣೆ ಮಾಡಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ತೀರ್ಮಾನಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಪ್ರವಾಸಿ ತಾಣವಾದ ಮೈಸೂರಿಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. 
ಹೀಗಾಗಿ ಹಳೆಯ ಡಿಸಿ ಕಚೇರಿಯನ್ನು ಕೇಂದ್ರ ಸರ್ಕಾರದ ‘ಸ್ವದೇಶ್ ದರ್ಶನ್’ ಯೋಜನೆಯಡಿ ಅಂದಾಜು 45 ಕೋಟಿ ರೂ. ವೆಚ್ಚದಲ್ಲಿ ಆರ್ಟ್ ಗ್ಯಾಲರಿಯನ್ನಾಗಿ ಪರಿವರ್ತನೆ ಮಾಡಲು ಡಿಪಿಆರ್ ತಯಾರಿಸಿ ಪ್ರಸ್ತಾವ ಸಿದ್ಧಪಡಿಸಲಾಗಿದೆ.
ಮಾದರಿ ಪರಿಚಯಕ್ಕೆ ಚಿಂತನೆ
ಮೈಸೂರನ್ನು ಆಳಿದ ರಾಜರು, ಅವರ ಅಪರೂಪದ ಕಲಾಕೃತಿಗಳು, ಹಳೆಯ ನಾಣ್ಯಗಳು, ತಾಮ್ರಫಲಕ, ಇತರ ವಸ್ತುಗಳನ್ನು ಹಳೇ ಡಿಸಿ ಕಚೇರಿಯಲ್ಲಿ ಇರಿಸಿ ವಸ್ತ್ರು ಸಂಗ್ರಹಾಲಯವನ್ನಾಗಿ ಮಾಡಲು ಉದ್ದೇಶಿಸಲಾಗಿದೆ. ರಾಜರು ಹಾಗೂ ಬ್ರಿಟಿಷರು ಆಡಳಿತ ನಡೆಸುವ ಅಠಾರ ಕಚೇರಿಯನ್ನು ಹೋಲುವಂತೆ ಒಳವಿನ್ಯಾಸಗೊಳಿಸುವ ಮೂಲಕ ಸಂಶೋಧಕರು ಹಾಗೂ ಮಕ್ಕಳಿಗೆ ಆಡಳಿತ ವ್ಯವಸ್ಥೆಯ ಮಾದರಿ ಪರಿಚಯ ಮಾಡಿಸಲು ಯೋಜನೆಯನ್ನೂ ರೂಪಿಸಲಾಗಿದೆ. 
ಇದರೊಂದಿಗೆ ಕೈಮಗ್ಗ ವಸ್ತುಗಳ ಮಾರಾಟಕ್ಕೆ ಉತ್ತೆಜನ ನೀಡುವ ಜತೆಗೆ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ರೂಪಿಸಲಾಗುವುದು. ಪಾರಂಪರಿಕತೆಗೆ ಧಕ್ಕೆಯಾಗದಂತೆ ಹಳೇ ಡಿಸಿ ಕಚೇರಿಯನ್ನು ಪ್ರವಾಸಿ ತಾಣವಾಗಿ ಮಾಡಲು ಚಿಂತಿಸಲಾಗಿದೆ. 
ನಗರದ ಹೃದಯ ಭಾಗದಲ್ಲಿಯೇ ಕಟ್ಟಡ ಇರುವುದರಿಂದ ಡಿ.ದೇವರಾಜ ಅರಸು ರಸ್ತೆಯನ್ನು ಹಳೇ ಜಿಲ್ಲಾಧಿಕಾರಿಗೆ ಸಂಪರ್ಕ ಕೊಂಡಿಯನ್ನಾಗಿಸಿದರೆ ಪ್ರವಾಸಿಗರು ಹೆಚ್ಚು ಆಗಮಿಸಲಿದ್ದಾರೆ ಎನ್ನುವ ಚಿಂತನೆ ಜಿಲ್ಲಾಡಳಿತದ್ದಾಗಿದೆ. ಆದರೆ ಈ ಕಾರ್ಯ ಇನ್ನೂ ಕಾರ್ಯಗತವಾಗದ ಕಾರಣ ಹಳೇ ಜಿಲ್ಲಾಧಿಕಾರಿ ಕಚೇರಿ ಇದ್ದ ಪಾರಂಪರಿಕ ಕಟ್ಟಡ ಸೊರಗುತ್ತಿದೆ.
ಸ್ವದೇಶ್ ದರ್ಶನ್ ಯೋಜನೆಯಡಿ ಹಳೇ ಜಿಲ್ಲಾಧಿಕಾರಿ ಕಚೇರಿಯನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗಿದೆ. ಮೈಸೂರು ರಾಜರ ಗತವೈಭವ, ಪರಂಪರೆ ಹಾಗೂ ಇತಿಹಾಸ ಬಿಂಬಿಸುವ ನಿಟ್ಟಿನಲ್ಲಿ ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ ಮಾಡಲು ಯೋಜನೆ ಕೈಗೊಳ್ಳಲು ಡಿಪಿಆರ್ ಸಿದ್ಧಪಡಿಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಕ್ರಮವಹಿಸಲಾಗುವುದು.
 ಜಿ.ಲಕ್ಷ್ಮೀಕಾಂತರೆಡ್ಡಿ ಜಿಲ್ಲಾಧಿಕಾರಿ