ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಸೇರಿದ್ದರು.  
ಮೈಸೂರು

ಜಾಗರಣೆಗೆ ಹರಿದು ಬಂದ ಭಕ್ತ ಸಾಗರ

ನಾಗೇಶ ಎಸ್
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಭಕ್ತ ಸಾಗರವೇ ಹರಿದು ಬಂದಿತ್ತು. ವಿಶೇಷ ಧಾರ್ಮಿಕ ಪೂಜೆ ಹಾಗೂ ರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಭಾನುವಾರ ಬೆಳಗಿನಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಸಾಮಾನ್ಯ ದರ್ಶನಕ್ಕೆ ದೇವಾಲಯದ ಒಳ ತೆರಳುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಕೆಲವರು 100 ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ದರ್ಶನ ಪಡೆದರು. ಮಹಾಶಿವರಾತ್ರಿ ಅಂಗವಾಗಿ ಬೆಳಗಿನ ಜಾವ 4ರಿಂದಲೇ ದೇವಾಲಯದಲ್ಲಿ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಉಷಾಕಾಲದ ಪೂಜೆ ನೆರವೇರಿಸಿ, ಶ್ರೀಕಂಠೇಶ್ವರಸ್ವಾಮಿಗೆ ಗಂಧ, ಕುಂಕುಮ, ಅರಿಶಿನ, ಹಾಲು, ಮೊಸರು, ಎಳನೀರು ಸೇರಿದಂತೆ ಫಲಪಂಚಾಮೃತ ಅಭಿಷೇಕ ನೆರೆವೇರಿಸಲಾಯಿತು.
ಮಡಿವಸ್ತ್ರಾಲಂಕಾರದ ನಂತರ ಮಹಾಮಂಗಳಾರತಿ ನೆರವೇರಿಸಿ, ದೇವರ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಯಿತು. ಶ್ರೀಕಂಠೇಶ್ವರಸ್ವಾಮಿಗೆ 11 ಬಾರಿ ರುದ್ರಪಾರಾಯಣ ಹಾಗೂ ಬೆಳಗಿನ ಅವಧಿಯಲ್ಲಿ ಅಭಿಷೇಕ ನಡೆಸಲಾಯಿತು. ಜತೆಗೆ ದೇವಾಲಯದ ಒಳಾವರಣದಲ್ಲಿ ಶಿವನ ವಿವಿಧ ಅವತಾರಗಳನ್ನು ಪ್ರತಿಬಿಂಬಿಸುವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಬಿಲ್ವಾರ್ಚನೆ ನೆರವೇರಿಸಲಾಯಿತು.
ದೇವಾಲಯದ ದಾಸೋಹ ಭವನದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಅವರು ಭಕ್ತರಿಗೆ ಬೆಳಗಿನ ತಿಂಡಿ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಸೋಹ ಭವನದಲ್ಲಿ ಮಧ್ಯಾಹ್ನದ ಊಟವನ್ನು ಮಾತ್ರ ನೀಡಲಾಗುತ್ತಿತ್ತು. ಇದರಿಂದ ದೇವಾಲಯಕ್ಕೆ ಆಗಮಿಸುವ ಭಕ್ತರು ಬೆಳಗ್ಗಿನ ತಿಂಡಿಗೆ ಪರದಾಡುತ್ತಿದ್ದರು. ಹೀಗಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ಜತೆಗೆ ವಿಶೇಷ ದಿನಗಳಂದು ರಾತ್ರಿ ಊಟವನ್ನು ಪ್ರಸಾದ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯಸವ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಇಂಧನ್ ಬಾಬು, ದೇವಾಲಯದ ಇಒ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.