ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ 8ನೇ ಕಲ್ಪಿತ ಪರೀಕ್ಷೆಯನ್ನು ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ವೀಕ್ಷಿಸಿದರು. ಬಿ.ಮಂಜುನಾಥ್, ರಮೇಶ್ ನರಸಯ್ಯ ಇನ್ನಿತರರಿದ್ದರು. 
ಮೈಸೂರು

ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣ

ಪ್ರಮುಖ ಮುಖ್ಯಾಂಶಗಳು

  • ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಕಳವಳ
  • ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆ ಮತ್ತು ಇತರ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ನೇಮಕವಾಗುತ್ತಿಲ್ಲ

ಮೈಸೂರು: 

ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆ ಮತ್ತು ಇತರ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ನೇಮಕವಾಗುತ್ತಿಲ್ಲ ಎಂದು ಪ್ರಾದೇಶಿಕ ಆಯುಕ್ತ  ನಿತೀಶ್ ಪಾಟೀಲ್ ಕಳವಳ ವ್ಯಕ್ತಪಡಿಸಿದರು.

ಪೀಪಲ್ಸ್ ಪಾರ್ಕ್ ಗ್ರಂಥಾಲಯ, ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸಹಯೋಗದಲ್ಲಿ ಗುರುವಾರ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ ಕುರಿತು 8ನೇ ಕಲ್ಪಿತ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯೋಗಾಕಾಂಕ್ಷಿಗಳು ಶಿಸ್ತಿನಿಂದ ಪರೀಕ್ಷೆ ಎದುರಿಸಬೇಕು. ಶ್ರಮ, ಶಿಸ್ತು ಮತ್ತು ಪ್ರಾಮಾಣಿಕತೆ ವ್ಯಕ್ತಿಯೊಬ್ಬರ ಜೀವನ ರೂಪಿಸಲು ಬಹು ಅಗತ್ಯ. ಉದ್ಯೋಗಾಕಾಂಕ್ಷಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಉತ್ತಮ ಸ್ನೇಹಿತ ವೃಂದ ಹೊಂದಿರಬೇಕು. ಹಾಗೆಯೇ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲ್ಪಿತ ಪರೀಕ್ಷೆಗಳು ಅಭ್ಯರ್ಥಿಯ ಮನೋಸ್ಥೈರ್ಯ ಹೆಚ್ಚಿಸುತ್ತದೆ. ಹೀಗಾಗಿ ನಗರ ಕೇಂದ್ರ ಗ್ರಂಥಾಲಯ ನಡೆಸಿರುವ ಕಲ್ಪಿತ ಪರೀಕ್ಷೆಗಳು ಉದ್ಯೋಗಾಕಾಂಕ್ಷಿಗಳಲ್ಲಿ ಸಾಕಷ್ಟು ವಿಶ್ವಾಸ ಮೂಡಿಸಿದೆ. ಇಡೀ ರಾಜ್ಯದಲ್ಲಿ ಇಂತಹ ಕಲ್ಪಿತ ಪರೀಕ್ಷೆ ನಡೆಯುತ್ತಿರುವುದು ಮೈಸೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಮಾತ್ರ ಎಂದರು.
ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಮುಂಬರುವ ಗ್ರಾಮ ಸಹಾಯಕ ಅಧಿಕಾರಿ ಪರೀಕ್ಷೆ, ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ, ಪೊಲೀಸ್ ಸಬ್ ಇನ್ ಸ್ಪೆಕ್ಟರ್‌ಗಳ ಪರೀಕ್ಷೆ ಮುಂತಾದವುಗಳಿಗೂ ಸಹ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಶೈಕ್ಷಣಿಕ ನಿರ್ದೇಶಕಿ ವೈ.ವಿ.ಗಾಯತ್ರಿ ಮಾತನಾಡಿ, ಇಂತಹ ಪರೀಕ್ಷೆಗಳಿಗೆ ಹಾಜರಾದ ಉದ್ಯೋಗಾಕಾಂಕ್ಷಿಗಳು ಅಂತಿಮ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ನೆರವಾಗಲಿದೆ ಎಂದರು.
ಸುಮಾರು 150 ಉದ್ಯೋಗಾಕಾಂಕ್ಷಿಗಳು ಹಾಜರಾಗಿದ್ದರು. ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ, ಅಣುಕು ಪರೀಕ್ಷೆ ಮತ್ತು ತರಬೇತಿ  ಕೇಂದ್ರದ ಮುಖ್ಯಸ್ಥ ರಮೇಶ್ ನರಸಯ್ಯ, ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಆಡಳಿತ ಅಧಿಕಾರಿ ಮೋಹನ್ ಇದ್ದರು