ಬಾಲ ಗರ್ಭಿಣಿಯರ ಪ್ರಕರಣಗಳ ಸಂಖ್ಯೆ ಏರುಮುಖ 
ಮೈಸೂರು

ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆ!

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಜಿಲ್ಲೆಯಲ್ಲಿ ಕಳೆದ 4 ವರ್ಷದಲ್ಲಿ 114 ಕೇಸ್ ದಾಖಲು
  • ಪ್ರಸಕ್ತ ಸಾಲಿನಲ್ಲೇ ತಾಯಿಯಾಗಿರುವ 32 ಬಾಲಕಿಯರು
  • ತಪ್ಪಿತಸ್ಥರು ಶಿಕ್ಷೆಯಾಗದೆ ಖುಲಾಸೆ

ಮಂಜುನಾಥ ತಿಮ್ಮಯ್ಯ ಭೋವಿ

ಸಾಂಸ್ಕೃತಿಕ ಜಿಲ್ಲೆ ಮೈಸೂರಿನಲ್ಲಿ ವರ್ಷದಿಂದ ವರ್ಷಕ್ಕೆ ಬಾಲ ಗರ್ಭಿಣಿಯರ ಪ್ರಕರಣಗಳ ಸಂಖ್ಯೆ ಏರುಮುಖವಾಗಿರುವುದು ಆತಂಕಕಾರಿ ಸಂಗತಿಯಾಗಿದೆ...!
ಕಳೆದ ನಾಲ್ಕು ವರ್ಷದಲ್ಲಿ 18ಕ್ಕಿಂತ ಕಡಿಮೆ ವಯಸ್ಸಿನ 114 ಬಾಲಕಿಯರು ಗರ್ಭಿಣಿಯರಾದ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 14ರಿಂದ 18 ವರ್ಷದೊಳಗಿನ ಬಾಲಕಿಯರು ತಾಯಿಯಾಗಿರುವುದು ಅಧಿಕವಾಗಿದೆ.
ಆಟ-ಪಾಠದೊಂದಿಗೆ ಬಾಲ್ಯವನ್ನು ಸಂಭ್ರಮಿಸಬೇಕಾಗಿರುವ ಬಾಲಕಿಯರು ಅನ್ಯರ ತಪ್ಪಿನಿಂದ ಗರ್ಭಧರಿಸಿ ‘ಭಾರ’ ಹೊತ್ತುಕೊಳ್ಳುತ್ತಿದ್ದು, ಏನು ಗೊತ್ತಿಲ್ಲದ ವಯಸ್ಸಿನಲ್ಲಿ ಶಿಶುವನ್ನು ಲಾಲನೆ-ಪೋಷಣೆ ಮಾಡುವಂತಾಗಿದೆ. ಅಪ್ರಾಪ್ತ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಎದುರಾದ ಇಂತಹ ‘ಜವಾಬ್ದಾರಿ’ಯಿಂದಾಗಿ ತಮ್ಮ ಭವಿಷ್ಯವನ್ನೇ ಬಲಿಕೊಡುತ್ತಾರೆ.
ಜಿಲ್ಲೆಯಲ್ಲಿ 2025-26ನೇ ಸಾಲಿನ ಅಕ್ಟೋಬರ್ ಅಂತ್ಯಕ್ಕೆ 32 ಬಾಲ ಗರ್ಭಿಣಿಯರ ಪ್ರಕರಣಗಳು ದಾಖಲಾಗಿವೆ. ಪ್ರಸಕ್ತ ವರ್ಷ ಪೂರ್ಣಗೊಳ್ಳಲು ಇನ್ನೂ ಬಾಕಿ ಇರುವ ಆರು ತಿಂಗಳಿನಲ್ಲಿ ಅರ್ಧಶತಕ ದಾಟುವ ಸಾಧ್ಯತೆ ನಿಚ್ಚಳವಾಗಿದೆ. ಕಳೆದ ವರ್ಷ ಅಂದರೆ, 2024-25ನೇ ಸಾಲಿನಲ್ಲಿ 53 ಬಾಲಕಿಯರು ತಾಯಿ ಆಗಿರುವ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 4 ವರ್ಷದಲ್ಲೇ ಹೆಚ್ಚು ಎಂಬುದು ಆಘಾತಕಾರಿ ವಿಷಯ.
2022-23ರಲ್ಲಿ 15 ಪ್ರಕರಣಗಳು, 2023-24ರಲ್ಲಿ 14 ಪ್ರಕರಣಗಳು ವರದಿಯಾಗಿದ್ದವು. ಏಕಾಏಕಿ ನಂತರವಾದ 2024-25ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 39 ಬಾಲ ಗರ್ಭಿಣಿಯರ ಪ್ರಕರಣಗಳು ಏರಿಕೆಯಾಗಿರುವುದು ದಿಗ್ಭ್ರಮೆ ಮೂಡಿಸಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ದಾಖಲಾಗಿರುವ ಈ ಅಂಕಿ-ಅಂಶಗಳನ್ನು ಗಮನಿಸಿದರೆ ಸಾರ್ವಜನಿಕರಲ್ಲಿ ಇನ್ನೂ ಅರಿವು ಮೂಡಿಲ್ಲ. ವಿವಿಧ ಕಠಿಣ ಕ್ರಮಗಳು, ನೀತಿ-ನಿಯಮಗಳು, ಕಾಯ್ದೆಗಳ ಭಯ ಸಹ ಇಲ್ಲವಾಗಿದೆ ಎಂಬುದನ್ನೂ ಸೂಚ್ಯವಾಗಿ ತೋರಿಸುತ್ತದೆ.

ಮೈಮೇಲೆ ಎರಗುವ ಸಮಸ್ಯೆಗಳ ಸರಮಾಲೆ:

ಪ್ರೀತಿ-ಪ್ರೇಮದಲ್ಲಿ ಮೈಮರೆತಾಗ, ಬಾಲ್ಯವಿವಾಹ, ಕೆಲ ಸಂದರ್ಭದಲ್ಲಿ ಅತ್ಯಾಚಾರದಿಂದಲೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಧರಿಸಿರುವುದು ವರದಿಯಾಗಿದೆ. ಇದರಿಂದ ಅನೇಕ ಸಮಸ್ಯೆಗಳನ್ನು ಸಂತ್ರಸ್ತೆಯರು ಮೈಮೇಲೆ ಎಳೆದುಕೊಂಡಂತಾಗುತ್ತದೆ.
ಇದು ಆರೋಗ್ಯ ಮತ್ತು ಸಾಮಾಜಿಕವಾಗಿ ತಾಯಿ, ಮಗು ಇಬ್ಬರಿಗೂ ಗಂಭೀರ ತೊಂದರೆಯನ್ನು ತಂದೊಡ್ಡುತ್ತದೆ. ಅವರ ದೇಹಗಳು ಪೂರ್ಣವಾಗಿ ಬೆಳೆದಿರುವುದಿಲ್ಲ. ಇದು ರಕ್ತಹೀನತೆ, ಅಧಿಕ ರಕ್ತದೊತ್ತಡ, ಅಕಾಲಿಕ ಹೆರಿಗೆ, ಕಡಿಮೆ ತೂಕದ ಶಿಶುಗಳ ಜನನ ಮತ್ತು ಶಿಕ್ಷಣ, ಉದ್ಯೋಗಾವಕಾಶಗಳು, ಆರ್ಥಿಕ ಹಿನ್ನಡೆಗೂ ಕಾರಣವಾಗುತ್ತದೆ.

ವಿವಿಧ ಕ್ರಮಗಳ ಬಳಿಕವೂ ತಹಬದಿಗೆ ಬಂದಿಲ್ಲ:

ಬಾಲಗರ್ಭಿಣಿ ಪ್ರಕರಣಗಳನ್ನು ತಡೆಯಲು ಅನೇಕ ಕ್ರಮ ಕೈಗೊಂಡಿದ್ದರೂ ಈ ಅಪರಾಧವನ್ನು ಸಂಪೂರ್ಣವಾಗಿ ತಹಬದಿಗೆ ತರಲು ಸಾಧ್ಯವಾಗಿಲ್ಲ. ಇದನ್ನು ತಡೆಯಲು ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ತಂದು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗೆ ಜಿಲ್ಲಾ-ತಾಲೂಕು ಹಂತದಲ್ಲಿ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡಿ ಜವಾಬ್ದಾರಿ ನಿಗದಿ ಪಡಿಸಲಾಗಿದೆ. ಸಂಕಷ್ಟದಲ್ಲಿರುವ ಮಗುವಿನ ರಕ್ಷಣೆಗೆ ಧಾವಿಸಲು ನೆರವಾಗುವ ‘ಮಕ್ಕಳ ಸಹಾಯವಾಣಿ-1098’ ದಿನ 24 ಗಂಟೆಯೂ ಕೆಲಸ ನಿರ್ವಹಿಸುತ್ತದೆ.

ಕಡಿಮೆಯಾಗದ ಬದಲು ಏರಿಕೆ ಏಕೆ?:

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಈ ಪ್ರಕರಣಗಳ ಕುರಿತು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲನೆ ನಡೆಸುತ್ತದೆ. ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.
ಎಲ್ಲ ಶಾಲೆಗಳಲ್ಲಿ ಅರಿವು ಕಾರ್ಯಕ್ರಮವನ್ನೂ ನಿಯಮಿತವಾಗಿ ಕೈಗೊಳ್ಳಲಾಗುತ್ತಿದೆ. ಆದಾಗ್ಯೂ, ಬಾಲ ಗರ್ಭಿಣಿಯರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬದಲಿಗೆ ಹೆಚ್ಚಾಗುತ್ತಿವೆ ಏಕೆ? ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ಪಾಲನೆ, ಪೋಷಣೆ ಕ್ರಮ:

ಸಂತ್ರಸ್ತೆ ರಕ್ಷಣೆಗೆ ಅನೇಕ ಕ್ರಮಗಳು, ವ್ಯವಸ್ಥೆಗಳು ಸಜ್ಜಾಗಿವೆ. ಪಾಲನೆ, ಪೋಷಣೆ ಅವಶ್ಯಕತೆ ಇರುವ ಮಕ್ಕಳ ಸುರಕ್ಷತೆ ಮತ್ತು ಪುನರ್ವಸತಿಗಾಗಿ ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಪಾಲನಾ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಸಂತ್ರಸ್ತೆಗೆ 18 ವರ್ಷ ವಯಸ್ಸು ಪೂರ್ತಿಗೊಳ್ಳುವವರೆಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. 23 ವರ್ಷದವರೆಗೂ ಅವಶ್ಯಕ ಬೆಂಬಲವನ್ನೂ ಸಹ ನೀಡಲಾಗುತ್ತದೆ.

ಸಂತ್ರಸ್ತೆಗೆ ಅನೇಕ ನೆರವುಗಳು:

ಸಂತ್ರಸ್ತೆಗೆ ಆರೋಗ್ಯ ಸೇವೆ ಮತ್ತು ವೈದ್ಯಕೀಯ ತಪಾಸಣೆಗಾಗಿ ಒಂದು ಬಾರಿಗೆ 6 ಸಾವಿರ ರೂ.ಮತ್ತು ಶಿಕ್ಷಣ ಮುಂದುವರಿಸಲು ಇಚ್ಛಿಸಿದಲ್ಲಿ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳಿಗೆ 4 ಸಾವಿರ ರೂಪಾಯಿಯಂತೆ 18 ವರ್ಷ ಪೂರ್ಣಗೊಳಿಸುವವರೆಗೆ ಆರ್ಥಿಕ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ.
ಸಂತ್ರಸ್ತ ಮಗುವಿಗೆ ಕಾನೂನು ಸಲಹೆ, ಆಪ್ತ ಸಮಾಲೋಚನೆಗಾಗಿ ಬೆಂಬಲ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ, ಮಕ್ಕಳ ಪಾಲನಾ ಕೇಂದ್ರಗಳಲ್ಲಿ ದಾಖಲಾಗುವ ಬಾಲಗರ್ಭಿಣಿ, ಬಾಲತಾಯಿ, ನವಜಾತ ಶಿಶುವಿಗೆ ಸಂಬಂಧಿಸಿದಂತೆ ಪಾಲಿಸಬೇಕಾದ ಕ್ರಮಬದ್ಧ ಕಾರ್ಯವಿಧಾನ(ಎಸ್‌ಒಪಿ) ರಾಜ್ಯ ಸರ್ಕಾರ ಜಾರಿಗೊಳಿಸಿದೆ.

ಕಾನೂನಿನ ಶಿಕ್ಷೆ:

ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಹಾಗೂ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌ರನ್ನು ಸಮನ್ವಯ, ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ಕಾರ್ಯಪಡೆಯಾಗಿ ಕೆಲಸ ಮಾಡುತ್ತದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಎಫ್‌ಐಆರ್ ದಾಖಲಿಸಿ ಕಾನೂನಿನ ಕ್ರಮಕ್ಕೆ ತಪ್ಪಿತಸ್ಥರನ್ನು ಒಳ ಪಡಿಸಲಾಗುತ್ತದೆ.

ಖುಲಾಸೆಯಾಗುತ್ತಿರುವ ಆರೋಪಿಗಳು:

ಬಾಲಗರ್ಭಿಣಿಯರ ಪ್ರಕರಣಗಳಿಗೆ ಕಾರಣವಾಗುವ ಆರೋಪಿಗಳು ಕಾನೂನಿನ ಕುಣಿಕೆಯಿಂದ ನುಣಿಚಿಕೊಳ್ಳುತ್ತಿದ್ದಾರೆ. ಹೆಚ್ಚಿನ ಪೋಕ್ಸೋ ಪ್ರಕರಣಗಳು ಪ್ರೇಮ ಪ್ರಕರಣಗಳಾಗಿ ದಾಖಲಾಗುತ್ತಿವೆ. ಸಾರ್ವಜನಿಕ ಜೀವನದಲ್ಲಿ ಪಾಲಕರು, ಸಂತ್ರಸ್ತ ಕುಟುಂಬಸ್ಥರು ತಮ್ಮ ಘನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಪರಿಭಾವಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೀಗಾಗಿ, ಅನೇಕ ಪ್ರಕರಣಗಳು ಬೆಳಕಿಗೂ ಬರುತ್ತಿಲ್ಲ. ದಾಖಲು ಸಹ ಆಗುತ್ತಿಲ್ಲ. ಹೀಗಾಗಿ, ತಪ್ಪಿತಸ್ಥರು ಶಿಕ್ಷೆಯಾಗದೆ ಖುಲಾಸೆಯಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ದಾಖಲಾಗಿರುವ ಬಾಲ ಗರ್ಭಿಣಿಯರ ಪ್ರಕರಣಗಳು
ವರ್ಷ ಪ್ರಕರಣಗಳ ಸಂಖ್ಯೆ
2022-23 15
2023-24 14
2024-25 53
2025-26(ಅಕ್ಟೋಬರ್ ವರೆಗೆ) 32
ಒಟ್ಟು 114

ಕಾರಣ ಏನು..?

"

ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳ ತಡೆಗೆ ಅನೇಕ ಕ್ರಮ ವಹಿಸಲಾಗಿದೆ. ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಅರಿವು, ಕಾನೂನು ಕ್ರಮ, ವಿವಿಧ ಇಲಾಖಾಧಿಕಾರಿಗಳಿಗೆ ಜವಾಬ್ದಾರಿ ಮಾಡಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಕುಟುಂಬದ ಘನತೆಗೆ ಧಕ್ಕೆಯಾಗುತ್ತದೆ ಎಂಬ ಪರಿಭಾವಿಸಿ ಕೆಲ ಸಂತ್ರಸ್ತರು, ಕುಟುಂಬಸ್ಥರು ಸ್ಪಂದಿಸುತ್ತಿಲ್ಲ. ಇದರಿಂದ ಆರೋಪಿಗಳು ಶಿಕ್ಷೆಯಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಅನುವಾಗುವಂತೆ ಕಾನೂನು ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ಕೋರಲಾಗಿದೆ.