ಜನಕೇಂದ್ರಿತ ಅಭಿವೃದ್ಧಿ ಹಾಗೂ ಸಾಕ್ಷ್ಯಾಧಾರಿತ ನೀತಿ ನಿರೂಪಣೆಯಲ್ಲಿ ತೊಡಗಿಸಿಕೊಂಡಿರುವ ಗ್ರಾಮ್ ಸಂಸ್ಥೆಯ ನೂತನ ಕೇಂದ್ರ ಕಚೇರಿಯನ್ನು ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಭಾನುವಾರ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ 15 ವರ್ಷಗಳ ಪಯಣ, ಸಾಧನೆ ಹಾಗೂ ಪ್ರಮುಖ ಮೈಲಿಗಲ್ಲುಗಳನ್ನು ಬಿಂಬಿಸುವ ಸಂಕಲ್ಪದಿಂದ ಸಾಧನೆಯೆಡೆಗೆ ಜರ್ನಿ ವಾಲ್ ಅನಾವರಣಗೊಳಿಸಲಾಯಿತು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮೈಸೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಗರದ ಸ್ವಚ್ಛತೆ, ಪ್ರಾಣಿಗಳ ಮೃತದೇಹಗಳ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ವ್ಯವಸ್ಥೆ, ಗೋವುಗಳ ಸಗಣಿ ನಿರ್ವಹಣೆ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಹೊಸ ಪ್ರವಾಸೋದ್ಯಮ ಚಟುವಟಿಕೆಯನ್ನು ರೂಪಿಸುವ ಅಗತ್ಯವಿದೆ ಎಂದರು.
ಈ ನಿಟ್ಟಿನಲ್ಲಿ ಗ್ರಾಮ್ ಸಂಸ್ಥೆಯು ಸ್ಥಳೀಯ ಅಭಿವೃದ್ಧಿ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಿ, ಸೂಕ್ತ ಸಲಹೆ ಹಾಗೂ ಕಾರ್ಯ ಯೋಜನೆಗಳನ್ನು ರೂಪಿಸಬೇಕು. ಅವುಗಳನ್ನು ಸರ್ಕಾರದ ವಿವಿಧ ಯೋಜನೆಗಳ ಮೂಲಕ ಅನುಷ್ಠಾನಗೊಳಿಸಲು ಮುಂದಾಗಬೇಕು. ಮೈಸೂರಿನ ಅಭಿವೃದ್ಧಿ ಕಾರ್ಯಗಳಲ್ಲಿ ಸಂಸ್ಥೆಯೊಂದಿಗೆ ಕೈಜೋಡಿಸಲು ಹಾಗೂ ಅಗತ್ಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಉದ್ಯಮಿ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಮೈಸೂರಿನಲ್ಲಿ ಅನೇಕ ಚಿಂತಕರು, ವಿಚಾರವಂತರು ಹಾಗೂ ಹೊಸ ಆಲೋಚನೆಗಳನ್ನು ಹೊಂದಿರುವವರಿದ್ದರೂ, ಅವರ ಚಿಂತನೆ ಮತ್ತು ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಸೂಕ್ತ ವೇದಿಕೆಯ ಅಗತ್ಯವಿದೆ ಎಂದರು.
ಗ್ರಾಮ್ ಸಂಸ್ಥೆಯ ಅಧ್ಯಕ್ಷ ಅರ್ಜುನ್ ರಂಗ ಮಾತನಾಡಿ, ಸಂಸ್ಥೆಯು ಸಂಪೂರ್ಣ ಲಾಭರಹಿತ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವು ಆರ್ಥಿಕ ಏರಿಳಿತಗಳ ನಡುವೆಯೂ ತನ್ನ ಸ್ವತಂತ್ರ ಅಸ್ತಿತ್ವ ಹಾಗೂ ಕಾರ್ಯನಿರ್ವಹಣೆಯನ್ನು ಉಳಿಸಿಕೊಂಡು ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಂಡು ಕಾರ್ಯಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸುವುದರ ಜತೆಗೆ ಸಮಾಜಮುಖಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಕೊಡುಗೆ ನೀಡುವ ಆಶಯ ಹೊಂದಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಸವರಾಜು ಆರ್.ಶ್ರೇಷ್ಠ ಇತರರಿದ್ದರು.