ಮೈಸೂರಿನ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಇಲ್ಯುಮಿನೇಟ್ ನಾಲ್ಕನೇ ಆವೃತ್ತಿಯ ಸಮ್ಮೇಳನವನು ಡಿಆರ್‌ಡಿಒ ವೈಮಾನಿಕ ಅಭಿವೃದ್ಧಿ ವಿಭಾಗದ ನಿರ್ದೇಶಕ ವೈ. ದಿಲೀಪ್ ಉದ್ಘಾಟಿಸಿದರು. ನ್ಯಾನೋ ಸೈನ್ಸ್ ಆಂಡ್ ಟೆಕ್ನಾಲಜಿ ಸಂಸ್ಥೆಯ ಪ್ರೊ. ನವಾಕಾಂತ ಭಟ್ ಹಾಗೂ ಇತರರು ಇದ್ದರು.
ಮೈಸೂರು: ತಂತ್ರಜ್ಞಾನದ ಬೆಳವಣಿಗೆಯಿಂದ ಯುದ್ಧ ಭೂಮಿಯ ಸ್ವರೂಪವೇ ಬದಲಾಗುತ್ತಿದೆ ಎಂದು ಬೆಂಗಳೂರಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವೈಮಾನಿಕ ಅಭಿವೃದ್ಧಿ ವಿಭಾಗದ ನಿರ್ದೇಶಕ ವೈ. ದಿಲೀಪ್ ಹೇಳಿದರು.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜು ಎಲ್ ಆಂಡ್ ಟಿ ಟೆಕ್ನಾಲಜಿ ಸರ್ವಿಸಸ್ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಇಲ್ಯುಮಿನೇಟ್ ನಾಲ್ಕನೇ ಆವೃತ್ತಿಯ ಸಮ್ಮೇಳನದಲ್ಲಿ ಮಾತನಾಡಿ, ಪ್ರಸ್ತುತ ಯುದ್ಧದಲ್ಲಿ ಏರ್‌ಕ್ರಾಫ್ಟ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ಹೀಗಾಗಿ ಯುದ್ಧದ ಮಾದರಿಗಳು ಬದಲಾಗುತ್ತಿದೆ ಎಂದರು.
ಯುನೈಟೆಡ್ ಸ್ಟೇಟ್ಸ್ ಬಾಹ್ಯಾಕಾಶದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನ ಆಧರಿತ ಡ್ರೋಣ್, ಯುದ್ಧ ವಿಮಾನಗಳ ಅನ್ವೇಷಣೆ ಮಾಡುತ್ತಿವೆ. ಹಾಗಾಗಿ ನಮ್ಮ ದೇಶ ಕೂಡ ಈ ಬೆಳವಣಿಗೆಗೆ ಪೂರಕವಾಗಿ ತಯಾರಾಗುವ ಅವಶ್ಯಕತೆ ಇದೆ. ಡಿಆರ್‌ಡಿಒ ಸಂಸ್ಥೆಯು ಸ್ವಿಫ್ಟ್ ಎಂಬ ಮಾನವ ರಹಿತ ಯುದ್ಧ ವಿಮಾನ ಅನ್ವೇಷನೆ ಮಾಡಿ, ಯಶಸ್ವಿ ಹಾರಾಟ ನಡೆಸಿದೆ.ಈ ರೀತಿಯ ಅನೇಕ ಅನ್ವೇಷನೆಗಳನ್ನು ಡಿಆರ್‌ಡಿಒ ಮಾಡುತ್ತಿದೆ. ಕೌಶಲವುಳ್ಳ, ವಿಷಯದ ಆಸಕ್ತಿ ಹೊಂದಿರುವ ತಂತ್ರಜ್ಞರಿಗೆ ಅವಕಾಶವೂ ಲಭ್ಯವಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರಂತರ ಶ್ರಮ ಪಟ್ಟರೆ ದೇಶಕ್ಕಾಗಿ ಶ್ರಮಿಸುವ ಅವಕಾಶವೂ ದೊರೆಯಲಿದೆ ಎಂದರು. ಬೆಂಗಳೂರಿನ ನ್ಯಾನೋ ಸೈನ್ಸ್ ಆಂಡ್ ಟೆಕ್ನಾಲಜಿ ಸಂಸ್ಥೆಯ ಪ್ರೊ. ನವಾಕಾಂತ ಭಟ್ ಮಾತನಾಡಿದರು.