ಕೆ.ಆರ್.ನಗರ ತಾಲೂಕಿನ ಅಡಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಅಡಗನಹಳ್ಳಿ ಶಾಲೆ ಮುಖ್ಯ ಶಿಕ್ಷಕ ಬ್ಯಾಡರಹಳ್ಳಿ ಭಾಸ್ಕರ್ ಪುಷ್ಪಾರ್ಚನೆ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ರಮ್ಯಾ, ಸದಸ್ಯರಾದ ಶಿಲ್ಪಾ, ಅರ್ಪಿತಾ ಇದ್ದರು. 
ಮೈಸೂರು

ರಾಷ್ಟ್ರಕವಿಗೆ ಸಂದ ಬಿರುದುಗಳು ಹಲವಾರು

ಕೆ.ಆರ್.ನಗರ: ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟಿ ಬೆಳೆಯುವಾಗ ಅಲ್ಪ ಮಾನವನಾಗಿರುತ್ತಾನೆ. ಅವನಿಗೆ ವಿದ್ಯೆ ಸಂಸ್ಕಾರವನ್ನು ಕಲಿಸಿ ಮತ್ತೆ ವಿಶ್ವಮಾನವನನ್ನಾಗಿ ಮಾಡಬೇಕಿದೆ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ ಎಂದು ತಾಲೂಕಿನ ಅಡಗನಹಳ್ಳಿ ಶಾಲೆ ಮುಖ್ಯಶಿಕ್ಷಕ ಬ್ಯಾಡರಹಳ್ಳಿ ಭಾಸ್ಕರ್ ಹೇಳಿದರು.
ತಾಲೂಕಿನ ಅಡಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ರಾಮಾಯಣ ದರ್ಶನ ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ ಪಡೆದ ಮೊದಲಿಗರಾಗಿದ್ದಾರೆ. 1959ರಲ್ಲಿ ಧಾರವಾಡದಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಕುವೆಂಪು ಎಂದು ತಿಳಿಸಿದರು.
ಕುವೆಂಪು ಯುಗದ ಕವಿ, ಜಗದ ಕವಿಯಾಗಿ ರಾಷ್ಟ್ರ ಕವಿಯಾಗಿದ್ದಾರೆ. 1991ರಲ್ಲಿ ಭಾರತ ಸರ್ಕಾರ ಪದ್ಮವಿಭೂಷಣ ನೀಡಿ ಗೌರವಿಸಿದೆ. ಜಯ ಭಾರತ ಜನನಿಯ ತನುಜಾತೆ.. ಜಯ ಹೇ ಕರ್ನಾಟಕ ಮಾತೆ, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.., ಓ ನನ್ನ ಚೇತನ ಆಗು ನೀ ಅನಿಕೇತನ.. ಇಂತಹ ವಾಕ್ಯಗಳನ್ನು ರಚಿಸುವ ಮೂಲಕ ಜನರಲ್ಲಿ ನಾವೆಲ್ಲ ಭಾರತೀಯರು, ನಾವು ಕನ್ನಡಿಗರು ಯಾವುದೇ ಜಾತಿ ಮತ-ಭೇದವಿಲ್ಲದೆ ಎಲ್ಲರೂ ಒಟ್ಟಿಗೆ ಬಾಳಬೇಕು ಎಂಬ ವಿಶ್ವಮಾನವ ಸಂದೇಶವನ್ನು ಸಾರಿದರು. ಅವರ ಆದರ್ಶಗಳನ್ನ ನಾವೆಲ್ಲ ಒಪ್ಪಿಕೊಂಡು ಅನುಸರಿಸಿ ಆಚರಿಸಿದಾಗ ಮಾತ್ರ ಅವರ ಅವರ ಜಯಂತಿ ಆಚರಣೆಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ರಮ್ಯಾ, ಸದಸ್ಯರಾದ ಶಿಲ್ಪಾ, ಅರ್ಪಿತಾ ಇದ್ದರು.