ಬೆಟ್ಟದಪುರ ಸಮೀಪದ ಜೋಗನಹಳ್ಳಿ ಗ್ರಾಮದ ಶ್ರೀ ಮೂರುರಮ್ಮ ತಾಯಿಯ ದೇಗುಲ.
- ಸಕಲ ಸಿದ್ಧತೆ ಪೂರ್ಣ
- 13 ವರ್ಷಗಳ ಬಳಿಕ ಆಚರಣೆ
ಬೆಟ್ಟದಪುರ: ಸಮೀಪದ ಜೋಗನಹಳ್ಳಿ ಗ್ರಾಮದಲ್ಲಿ ಜೂ.5ರ ಶುಕ್ರವಾರ ಗ್ರಾಮದೇವತೆ ಶ್ರೀ ಮೂರುರಮ್ಮ ತಾಯಿಯ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಸುಮಾರು 13 ವರ್ಷಗಳ ಬಳಿಕ ಆಚರಿಸುತ್ತಿರುವ ಜಾತ್ರಾ ಮಹೋತ್ಸವಕ್ಕೆ ಎಲ್ಲ ಕೋಮಿನ ಜನರು ಒಗ್ಗಟ್ಟಾಗಿ ಪೂರ್ವ ತಯಾರಿ ನಡೆಸಲಾಗುತ್ತಿದೆ. ಗ್ರಾಮದ ಭಕ್ತರು ಹಾಗೂ ದಾನಿಗಳ ಸಹಕಾರದೊಂದಿಗೆ ನೂತನ ದೇವಾಲಯ ನಿರ್ಮಿಸಲಾಗಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಬಣ್ಣ ಬಳಿದು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ದೇವಿಯ ರಥೋತ್ಸವವು ಶುಕ್ರವಾರ ಮಧ್ಯಾಹ್ನ ನಡೆಯಲಿದ್ದು, ಇದಕ್ಕಾಗಿ ರಥವನ್ನು ಸುಂದರವಾಗಿ ಅಲಂಕರಿಸಲಾಗಿದೆ. ರಥಕ್ಕೆ ಬಣ್ಣ ಬಳಿದು ಸಿಂಗಾರ ಮಾಡಲಾಗಿದೆ. ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದ ಆವರಣ ಸ್ವಚ್ಛತೆ, ವಿದ್ಯುತ್ ದೀಪಾಲಂಕಾರ, ಕುಡಿಯುವ ನೀರು ಸೇರಿದಂತೆ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ.
ಜಾತ್ರೆಯ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ ವಿಧಿವಿಧಾನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಜೋಗನಹಳ್ಳಿ ಹಾಲು ಉತ್ಪದಕ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.