ಮೈಸೂರು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಭಾನುವಾರ ಮಾವು ಹಲಸು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಂಕರೇಗೌಡ, ಡಾ.ಮಂಜುನಾಥ ಅಂಗಡಿ, ಕೃಷ್ಣಪ್ರಸಾದ್ ಇದ್ದರು.
ಮೈಸೂರು: ಹಲಸು ಮತ್ತು ಮಾವಿನ ಅಪಾರವಾದ ವೈವಿಧ್ಯ ನಮ್ಮ ಮೈಸೂರು ಭಾಗದಲ್ಲಿದೆ. ಹುಳಿ ಮಾವಿನ ಮರ ಮತ್ತು ಇತರ ಕಾಡು ಮಾವಿನ ತಳಿಗಳ ಭಂಡಾರವೇ ನಮ್ಮ ಕಾಡು ಪ್ರದೇಶದಲ್ಲಿದೆ. ಅಪರೂಪದ ಹಲಸಿನ ತಳಿಗಳು ಕೂಡ ಇಲ್ಲಿವೆ. ಇವುಗಳನ್ನು ಸಂರಕ್ಷಿಸದೆ ಹೋದರೆ ಮುಂದಿನ ಪೀಳಿಗೆಗೆ ಈ ತಳಿಗಳು ನೋಡಲು ಕೂಡ ಸಿಗುವುದಿಲ್ಲ. ಇಂತ ತಳಿಗಳನ್ನು ಗುರುತಿಸಿ, ಜನಪ್ರಿಯ ಮಾಡಬೇಕಾದ ಅಗತ್ಯವಿದೆ ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಶಂಕರೇಗೌಡ ಕರೆಕೊಟ್ಟರು.
ಸಹಜ ಸಮೃದ್ಧ , ದೇಸಿ ಸೀಡ್ಸ್ ಪ್ರಡ್ಯೂಸರ್ ಕಂಪನಿ ಮತ್ತು ತೋಟಗಾರಿಕೆ ಇಲಾಖೆ, ಕಿಸಾನ್ ಮಾಲ್ ಆಶ್ರಯದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಮಾವು ಹಲಸು ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ನಾ ಕಂಡಂತೆ ಹಲಸು ಚಿತ್ರಕಲಾ ಸ್ಪರ್ಧೆಯ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಹಲಸಿನ ಬಗ್ಗೆ ಅರಿವು ಮೂಡಿಸಿ ಅವರಿಗೆ ನಮ್ಮ ಸ್ಥಳೀಯ ಸಸ್ಯ ಸಂಪತ್ತಿನ ಪರಿಚಯ ಮಾಡಿಕೊಡುತ್ತಿರುವುದು, ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಹಲಸಿನ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಜುನಾಥ ಅಂಗಡಿ ಮಾತನಾಡಿ, ಕುಕ್ಕರಹಳ್ಳಿ ಕೆರೆಯ ತೋಟಗಾರಿಕಾ ನರ್ಸರಿ ಆವರಣದಲ್ಲಿ ಗ್ರಾಹಕರು ಮತ್ತು ರೈತರಿಗಾಗಿ ಕಿಸಾನ್ ಮಾಲ್ ಆರಂಭಿಸಲಾಗಿದೆ. ಇಲ್ಲಿ ನಿರಂತರವಾಗಿ ಸಾವಯವ ಉತ್ಪನ್ನಗಳು, ಕೃಷಿ ಉಪಕರಣಗಳು ಮತ್ತು ಜೈವಿಕ ಒಳಸುರಿಗಳನ್ನು ಮಾರಾಟ ಮಾಡಲಾಗುತ್ತದೆ. ರೈತರು ಮತ್ತು ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಹಜ ಸಮೃದ್ಧ ಸಂಸ್ಥೆಯಯ ಮುಖ್ಯಸ್ಥ ಕೃಷ್ಣಪ್ರಸಾದ್ ಇದ್ದರು.
ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ನಾ ಕಂಡಂತೆ ಹಲಸು ಚಿತ್ರಕಲಾ ಸ್ಪರ್ಧೆಯ 5 ರಿಂದ
9ವರ್ಷದ ವಿಭಾಗದಲ್ಲಿ ಎಸ್. ಮೌಲ್ಯ ( ಪ್ರಥಮ), ಎಸ್.ಕೆ. ರಿಷಿಕಾ ನಂದಿ (ದ್ವಿತೀಯ) ಮತ್ತು ಎ.ವಿಹಾನ್ (ತೃತೀಯ) ಬಹುಮಾನ ಗಳಿಸಿದರು. 10 ರಿಂದ 12 ವರ್ಷದ ವಿಭಾಗದಲ್ಲಿ ಆದ್ಯ ಎ. ಶ್ರೀವತ್ಸ (ಪ್ರಥಮ), ಧೀರಜ್ (ದ್ವಿತೀಯ), ಗೋಕುಲ್ ಆರ್ಯನ್ (ತೃತೀಯ) ಬಹುಮಾನ ಗಳಿಸಿದರು.
ಹಲಸಿನ ಹಣ್ಣಿನ ತೊಳೆ ತಿನ್ನುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಜಯಲಕ್ಷ್ಮೀ ಮತ್ತು ಪುರುಷರ ವಿಭಾಗದಲ್ಲಿ ಎಸ್.ಡಿ. ಮೋಹನ್ ಕುಮಾರ್ ಬಹುಮಾನ ಗಳಿಸಿದರು. ಹಲಸು ಎತ್ತುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರಾಮಚಂದ್ರ, ಹಲಸು ಹಣ್ಣಿನ ತೂಕ ಊಹಿಸುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಸುಮಿತ ಬಹುಮಾನ ಗಳಿಸಿದರು. ಭರತನಾಟ್ಯ ಕಲಾವಿದರಾದ ಪೂಜಶ್ರಿ ಮತ್ತು ಎಸ್.ವರಮಹಾಲಕ್ಷಿ ಭರತನಾಟ್ಯ ಪ್ರದರ್ಶನ ನೀಡಿದರು.
ಎರಡು ದಿನಗಳ ಕಾಲ ಆಯೋಜಿಸಿದ್ದ ಮಾವು ಹಲಸು ಹಬ್ಬ ಭಾನುವಾರ ಮುಕ್ತಾಯಗೊಂಡಿತು. 2 ದಿನಗಳ ಕಾಲ ಆಯೋಜಿಸಿದ್ದ ಮೇಳಕ್ಕೆ ಆರು ಸಾವಿರಕ್ಕೂ ಹೆಚ್ಚಿನ ಜನರು ಮೇಳಕ್ಕೆ ಭೇಟಿ ನೀಡಿದರು. ಕೆಂಪಲಸು ತಳಿಗಳಾದ ಸಿದ್ದು ಮತ್ತು ಶಂಕರ ತಳಿಗಳ ಒಂದು ಸಾವಿರ ಗಿಡಗಳು ಮಾರಾಟವಾದವು. ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಹಲಸು ಬೆಳೆಗಾರರು ತಂದಿದ್ದ ಹಲಸು ಮಾರಾಟವಾಯಿತು. ಕೆಂಪು ಬಣ್ಣದ ಚಂದ್ರ ಹಲಸು ಕೊಳ್ಳಲು ಗ್ರಾಹಕರು ಮುಗಿ ಬಿದ್ದರು. ಹಲಸಿನ ಮೌಲ್ಯವರ್ಧಿತ ಪದಾರ್ಥಗಳನ್ನು ಜನರು ಆಸಕ್ತಿಯಿಂದ ಖರೀದಿ ಮಾಡಿದ್ದು ವಿಶೇಷ. ದಶೇರಿ ಮತ್ತು ಇತರೆ ಸಾವಯವ ಮಾವು ಮಾರಾಟಕ್ಕೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಎರಡು ದಿನಗಳ ಮೇಳದಲ್ಲಿ 30 ಲಕ್ಷದ ವಹಿವಾಟು ನಡೆಯಿತು.