ಹುಣಸೂರು ತಾಲೂಕು ಶಿರೇನಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿದರು. ಶ್ರೀ ನಟರಾಜ ಸ್ವಾಮೀಜಿ, ಶ್ರೀ ಸಾಂಬಸದಾಶಿವ ಸ್ವಾಮೀಜಿ ಸೇರಿದಂತೆ ಇತರರು ಇದ್ದರು. 
ಮೈಸೂರು

ಮಹನೀಯರ ಜೀವನಾದರ್ಶ ನಮ್ಮ ಬಾಳಿಗೆ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಸಂಗೊಳ್ಳಿ ರಾಯಣ್ಣರ ಕಂಚಿನ ಪ್ರತಿಮೆ ಅನಾವರಣ
ಹುಣಸೂರು : ಸಮಾಜದ ಪರಿವರ್ತನೆಗೆ ಆದರ್ಶರಾಗಿ ಬಾಳಿದ ಮಹನೀಯರ ಜೀವನವೇ ನಮ್ಮೆಲ್ಲರನ್ನೂ ಸನ್ನಡತೆಯತ್ತ ಕೊಂಡೊಯ್ಯುವ ಸಾಧನವಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಗಾವಡಗೆರೆ ಹೋಬಳಿಯ ಶಿರೇನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಗೊಳ್ಳಿ ರಾಯಣ್ಣರ ಕಂಚಿನ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು.
ಜಯಂತಿಗಳ ಆಚರಣೆ, ಪುತ್ಥಳಿಗಳ ಅನಾವರಣ ನಮ್ಮನ್ನು ಎಚ್ಚರಿಸುವ ವೇದಿಕೆಗಳಾಗಿವೆ. ಈ ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹನೀಯರ ಜೀವನಾದರ್ಶಗಳೇ ನಮ್ಮ ಬಾಳಿಗೆ ದಾರಿದೀಪವಾಗಬೇಕು. ಶಿರೇನಹಳ್ಳಿಯಲ್ಲಿ ಯುವಸಮೂಹ ಒಗ್ಗಟ್ಟಿನಿಂದ ದುಡಿದು ಆಸಕ್ತಿ ವಹಿಸಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪಿಸಿರುವುದು ಶ್ಲಾಘನೀಯ. ಯುವಕರು ಅನ್ಯೋನ್ಯತೆಯಿಂದ ಪ್ರೀತಿ ವಿಶ್ವಾಸ ಸಹೋದರತ್ವದಿಂದ ಇರಬೇಕಾದದ್ದು ಬಹಳ ಮುಖ್ಯ. ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದು ಸಹಜ. ಆದರೆ ಚುನಾವಣೆ ನಂತರ ಕೊಡುವ ಗೌರವ ನನ್ನ ತಂದೆ ಶಾಸಕರಾಗಿದ್ದ ಕಾಲದಿಂದಲೂ ಊರಿನಲ್ಲಿ ನಡೆದುಕೊಂಡು ಬಂದಿದೆ. ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಬೇಕಿದ್ದು, ಯುವಕರು ನನ್ನ ಗಮನಕ್ಕೆ ತಂದಿದ್ದಾರೆ. ಮುಂದಿನ ಅನುದಾನದ ಸಮೇತ ಕಾಮಗಾರಿಗೆ ಪೂಜೆ ಸಲ್ಲಿಸಲು ಬರುತ್ತೇನೆ ಎಂದರು.
ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಯುವಕರು ಸಂಪೂರ್ಣ ವಿದ್ಯಾವಂತರಾಗದಿದ್ದರೆ ಭವಿಷ್ಯವಿಲ್ಲ ಮುಂದಿನ ಭವಿಷ್ಯಕ್ಕೆ ಬದುಕಿನ ಆಲೋಚನೆ ಮಾಡಬೇಕು ಎಂದರು.
ಕಂಚಿನ ಪ್ರತಿಮೆಯ ದಾನಿ ಹಾಗೂ ಕಾವೇರಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ವ್ಯವಸ್ಥಾಪಕ ಡಾ.ಲೋಹಿತ್ ಮಾತನಾಡಿ, ತಾಲೂಕಿಗೆ ಬರಿಗೈಲಿ ಬಂದಾಗ ನೀವು ಕೊಟ್ಟ ಪ್ರೀತಿ ವಾತ್ಸಲ್ಯದಿಂದ ಹೃದಯವನ್ನು ತುಂಬಿಸಿ ಈ ಎತ್ತರಕ್ಕೆ ಬೆಳೆಯಲು ಸಹಕಾರಿಯಾಯಿತು ಎಂದರು.
ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಹಾಗೂ ಮಾದಳ್ಳಿ ಉಕ್ಕಿನ ಕಂತೆ ಮಠದ ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮೌರ್ಯ, ಜಿಲ್ಲಾ ಪರಿಷತ್ ಮಾಜಿ ಸದಸ್ಯರಾದ ಅಮಿತ್ ದೇವರಹಟ್ಟಿ, ಸುರೇಂದ್ರ, ಸಮಾಜ ಸೇವಕ ತಾಲೂಕು ಜೆಡಿಎಸ್ ಮುಖಂಡ ಹರವೆ ಶ್ರೀಧರ್, ರಾಜ್ಯ ಅಹಿಂದ ರೈತ ಸಂಘದ ಅಧ್ಯಕ್ಷ ಶಿವಶಂಕರ್, ಜಿಲ್ಲಾ ಕುರುಬ ಸಂಘದ ಉಪಾಧ್ಯಕ್ಷ ಬಸವರಾಜೇಗೌಡ, ಅರಸು ನಿಗಮ ಮಂಡಳಿಯ ಮಾಜಿ ನಿರ್ದೇಶಕ ಎ.ಪಿ.ಸ್ವಾಮಿ, ರೈತ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಸಣೇಗೌಡ, ಗ್ರಾಮದ ಯಜಮಾನ ಮಹೇಶ್, ಹಲವಾರು ಮುಖಂಡರು ಸೇರಿದಂತೆ ಸಂಗೋಳ್ಳಿ ರಾಯಣ್ಣ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಮಹಿಳೆಯರು ಕಳಸ ಹೊತ್ತು ಗಣ್ಯರನ್ನು ಮೆರವಣಿಗೆಯ ಮೂಲಕ ಬರಮಾಡಿಕೊಂಡರು.