ಹುಣಸೂರು ತಾಲೂಕು ಸೋಮನಹಳ್ಳಿಯಲ್ಲಿ ಮರದೂರು ಏತ ನೀರಾವರಿ ಯೋಜನೆಗೆ ಶಾಸಕ ಜಿ.ಡಿ.ಹರೀಶ್‌ಗೌಡ ಗಂಗಾಮಾತೆಗೆ ಪೂಜೆ ಸಲ್ಲಿಸುವ ಮೂಲಕ ಮಂಗಳವಾರ ಚಾಲನೆ ನೀಡಿದರು. ಮುಖಂಡರಾದ ಶಿವಕುಮಾರ್,ಕೆಂಗಯ್ಯ, ಗೋವಿಂದೇಗೌಡ, ದಿನೇಶ್, ಗವೀನಾಯಕ, ಪಿಡಿಒ ಮಹದೇವಸ್ವಾಮಿ, ಎಇಇ ರೇಣುಕೇಶ್ವರ್ ಇತರರಿದ್ದರು. 
ಮೈಸೂರು

ಶೋಷಿತ ವರ್ಗಗಳ ಆರ್ಥಿಕ ಸಬಲೀಕರಣಕ್ಕೆ ಅರಸು ಶ್ರಮ

ಹುಣಸೂರು: ಕಳೆದ 5 ವರ್ಷಗಳಿಂದ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿದ್ದ ತಾಲೂಕಿನ ಮರದೂರು ಏತ ನೀರಾವರಿ ಯೋಜನೆ ಘಟಕ 3 ಕೋಟಿ ರೂ.ಗಳ ವೆಚ್ಚದಡಿ ದುರಸ್ತಿಗೊಂಡ ನಂತರ ಎರಡು ಕೆರೆಗಳ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಜಿ.ಡಿ. ಹರೀಶ್‌ಗೌಡ ಮಂಗಳವಾರ ಚಾಲನೆ ನೀಡಿದರು.

ಗಂಗಾ ಪೂಜೆ ಸಲ್ಲಿಸುವ ಮೂಲಕ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಜಿ.ಡಿ.ಹರೀಶ್ ಗೌಡ ಚಾಲನೆ ನೀಡಿದರು. ಕಳೆದ 5 ವರ್ಷಗಳಿಂದ ಯೋಜನೆ ಸ್ಥಗಿತಗೊಳ್ಳುವ ಮೂಲಕ ಈ ಭಾಗದ ರೈತರ ಕೃಷಿ ಕಾರ್ಯಕ್ಕೆ ಅನಾನುಕೂಲವಾಗಿತ್ತು. ನಾನು ಶಾಸಕನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ 2024ರಲ್ಲಿ ಮರದೂರು ಏತ ನೀರಾವರಿ ಯೋಜನೆಯೂ ಸೇರಿದಂತೆ ಇನ್ನಿತರ ಏತ ನೀರಾವರಿ ಯೋಜನೆಗಳ ದುರಸ್ತಿಗಾಗಿ ಒಟ್ಟು 8 ಕೋಟಿ ರೂ.ಗಳ ಅಂದಾಜು ಪ್ರಸ್ತಾವನೆಯನ್ನು ಅಂದಿನ ಸಣ್ಣ ನೀರಾವರಿ ಮಂತ್ರಿ ಬೋಸರಾಜು ಅವರಿಗೆ ಸಲ್ಲಿಸಿದ್ದೆ. ಈ ಪೈಕಿ ಮರದೂರು ಏತ ನೀರಾವರಿ ಯೋಜನೆಗೆ 3 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿ ಇದೀಗ ಕಾಮಗಾರಿ ಪೂರ್ಣಗೊಂಡು ಚಾಲನೆ ನೀಡಿದ್ದೇನೆ. ಸೋಮನಹಳ್ಳಿ ಕೆರೆ, ಸೋಮನಹಳ್ಳಿ ಕಟ್ಟೆ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದೇ ಘಟಕದಿಂದ ಮುಂದಿನ ದಿನಗಳಲ್ಲಿ ಉಯಿಗೌಡನಹಳ್ಳಿಯ ಬಸವನಕೆರೆಯನ್ನೂ ತುಂಬಿಸುವ ಕಾರ್ಯ ನಡೆಯಲಿದೆ. ಕೆರೆಗಳು ಕೇವಲ ನೀರು ತುಂಬಿಸುವ ಸಂಗ್ರಹಣಾ ತಾಣಗಳಲ್ಲ. ಅವು ಗ್ರಾಮೀಣ ಬದುಕಿನ ಜೀವನಾಡಿಗಳಾಗಿವೆ ಎಂದರು.

ಅಭಿವೃದ್ಧಿಕಾಮಗಾರಿಗೆ ಅನುದಾನ ಕೊರತೆ: ರಾಜ್ಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಅಭಿವೃಧ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎಲ್ಲ 224 ಶಾಸಕರನ್ನೂ ಕಾಡುತ್ತಿದೆ. ಇದನ್ನು 4-5 ಬಾರಿ ಶಾಸಕರಾಗಿರುವ ಕಾಂಗ್ರೆಸ್‌ನ ಹಿರಿಯ ಶಾಸಕರೇ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಹೊಸ ಸರ್ಕಾರ ರಚನೆಯಾಗಿದ್ದು, ನೀವು ಮುಖ್ಯಮಂತ್ರಿಯಾದಿಯಾಗಿ ಎಲ್ಲ ಸಚಿವರನ್ನು ಭೇಟಿಯಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಲಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಯಾರೇ ಸಹಾಯಹಸ್ತ ಚಾಚಿದರೂ ಪಡೆಯಲು ನಾನು ಸಿದ್ಧ. ಒಟ್ಟಾರೆ ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದರು.

ಎಇಇ ರೇಣುಕೇಶ್ವರ್ ಮಾತನಾಡಿದರು.ಈ ವೇಳೆ ಸಣ್ಣ ನೀರಾವರಿ ಇಲಾಖೆ ಎಇಇ ರೇಣುಕೇಶ್ವರ, ಪಿಡಿಒ ಮಹದೇವಸ್ವಾಮಿ, ಮುಖಂಡರಾದ ಕೆಂಗಯ್ಯ, ಶಿವಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಗೋವಿಂದೇಗೌಡ, ದಿನೇಶ್, ಗವಿನಾಯಕ, ರಾಜೇಶ್, ಲಿಂಗೇಗೌಡ ಇತರರು ಹಾಜರಿದ್ದರು.