ಹನಗೋಡು ಹೋಬಳಿಯ ಅರಸು ಕಲ್ಲಹಳ್ಳಿಯಲ್ಲಿರುವ ದಿ.ಡಿ ದೇವರಾಜು ಅರಸು ಅವರ ಸಮಾಧಿಗೆ ಅಹಿಂದ ವರ್ಗದ ಮಠಗಳ ಒಕ್ಕೂಟದ ಮಠಾಧೀಶರು ಭೇಟಿ ನೀಡಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಶ್ರೀ ಕೃಷ್ಣಯಾದವ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಬಸವ ಕುಂಬಾರಗುಂಡಯ್ಯ ಸ್ವಾಮೀಜಿ ಇತರರಿದ್ದರು.
ಹನಗೋಡು: ಹಿಂದುಳಿದ ವರ್ಗಗಳ ಏಳಿಗೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 44ನೇ ಪುಣ್ಯಸ್ಮರಣೆ ಅಂಗವಾಗಿ ರಾಜ್ಯ ಅಹಿಂದ ಮಠಾಧಿಪತಿಗಳ ಒಕ್ಕೂಟದ ಮಠಾಧೀಶರ ತಂಡ ಮಂಗಳವಾರ ಹನಗೋಡು ಹೋಬಳಿಯ ಅರಸು ಕಲ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಅರಸು ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿತು.
ರಾಜ್ಯದ ವಿವಿಧ ಅಹಿಂದ ಸಮುದಾಯಗಳ ಮಠಾಧೀಶರು ಒಂದೇ ವೇದಿಕೆಯಲ್ಲಿ ಸೇರಿ ಡಿ.ದೆವರಾಜ ಅರಸು ಅವರ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಸ್ಮರಿಸಿದರು.
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಡಿ.ದೇವರಾಜ ಅರಸು ಅವರು ಹಿಂದುಳಿದ, ದಲಿತ ಹಾಗೂ ಶೋಷಿತ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ನಾಯಕರು ಎಂದು ಬಣ್ಣಿಸಿದರು.
ಅರಸು ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಫಲವಾಗಿ ಅಹಿಂದ ವರ್ಗಗಳ ಜನರು ಇಂದು ಶಿಕ್ಷಣ, ರಾಜಕೀಯ, ಆಡಳಿತ ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಸಾಧ್ಯವಾಗಿದೆ. ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿದರು.
ತಂಡದಲ್ಲಿದ್ದ ಜಗದ್ಗುರುಗಳು: ಕನಕ ಗುರುಪೀಠದ ಬೆಂಗಳೂರು ವಿಭಾಗದ ಜಗದ್ಗುರು ಶ್ರೀ ಈಶ್ವರಾನಂದ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಯಾದವ ಮಹಾಸಂಸ್ಥಾನ (ಗೊಲ್ಲರ) ಗುರುಪೀಠದ ಶ್ರೀ ಕೃಷ್ಣಯಾದವ ಸ್ವಾಮೀಜಿ, ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಕುಂಬಾರ ಗುಂಡಯ್ಯ ಗುರುಪೀಠದ ಶ್ರೀ ಬಸವ ಕುಂಬಾರಗುಂಡಯ್ಯ ಸ್ವಾಮೀಜಿ, ಹಡಪದ ಗುರುಪೀಠದ ಶ್ರೀ ಅನ್ನಧಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಕೇತೇಶ್ವರ ಸ್ವಾಮೀಜಿ, ಹೆಳವ ಗುರುಪೀಠದ ಶ್ರೀ ಬಸವ ಬೃಂಗೇಶ್ವರ ಸ್ವಾಮೀಜಿ ಸೇರಿದಂತೆ 32 ಮಠಗಳ ಮಠಾಧೀಶರು ಇದ್ದರು.
ಕರ್ನಾಟಕ ರಾಜ್ಯ ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ವಿಜಯಕುಮಾರ್, ಹುಣಸೂರು ತಾಲೂಕು ಭೋವಿ ಸಮಾಜದ ಅಧ್ಯಕ್ಷ ತಿಮ್ಮರಸ ಭೋವಿ, ತಾಪಂ ಮಾಜಿ ಸದಸ್ಯ ಚಿನ್ನವಿರಯ್ಯ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಕುನ್ನೇಗೌಡ, ನಾಯಕ ಸಮಾಜದ ಅಧ್ಯಕ್ಷ ಅಣ್ಣಯ್ಯನಾಯಕ, ನಿವೃತ್ತ ಎಇಇ ವಿ.ವೈ.ಭೋಜರಾಜ್, ತಿಮ್ಮರಾಜಣ್ಣ. ಕೆ ಗಣೇಶ್. ಜಗದೀಶ್. ತಿಮ್ಮಣ್ಣ. ಗಣೇಶ್ ಭೋವಿ. ರವಿಕುಮಾರ್ ನಾಗರಾಜ್ ಕೊಂಡಯ್ಯ, ಕೃಷ್ಣ, ರಾಮು ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.