ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಜನಜಾತೀಯ ಭಾಷಾ ಉತ್ಸವವನ್ನು ಗಣ್ಯರು ಉದ್ಘಾಟಿಸಿದರು. ಪದ್ಮಶ್ರೀ ಡಾ.ದಮಯಂತಿ ಬೆಶ್ರಾ, ಪ್ರೊ.ಚಂದ್ರ ಭೂಷಣ್ ಶರ್ಮಾ, ಪ್ರೊ.ಬಸವರಾಜ ಕೋಡಗುಂಟಿ, ಡಾ.ಅಲೀಂದ್ರ ಬ್ರಹ್ಮ, ಡಾ.ಸುಜೋಯ್ ಸರ್ಕಾರ್ ಇದ್ದರು.  
ಮೈಸೂರು

ಬಾಂಧವ್ಯ ಬೆಸೆಯುವ ಸೇತುವೆಯೇ ಭಾಷೆ

* ಪದ್ಮಶ್ರೀ ಡಾ.ದಮಯಂತಿ ಬೆಶ್ರಾ ಅಭಿಮತ * ಜನಜಾತೀಯ ಭಾಷಾ ಉತ್ಸವಕ್ಕೆ ಚಾಲನೆ

ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ನಿರಂತರ ಬದ್ಧತೆ ಮತ್ತು ಪರಿಶ್ರಮ ಬೇಕು ಎಂದು ಒಡಿಶಾದ ಮಹಾರಾಜ ಪೂರ್ಣಚಂದ್ರ ಕಾಲೇಜಿನ ಒಡಿಯಾ ವಿಭಾಗದ ಮಾಜಿ ಮುಖ್ಯಸ್ಥೆ, ಪದ್ಮಶ್ರೀ ಡಾ.ದಮಯಂತಿ ಬೆಶ್ರಾ ಹೇಳಿದರು.

ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಜನಜಾತೀಯ ಗೌರವ ದಿವಸದ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಜನಜಾತೀಯ ಭಾಷಾ ಉತ್ಸವವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಮಣಿಪುರ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಪ್ರತಿನಿಧಿಗಳನ್ನು ಭೇಟಿಯಾದ ಸಂದರ್ಭವನ್ನು ವಿವರಿಸಿದ ಅವರು, ಆರಂಭದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದಾಗ ಅಷ್ಟೊಂದು ಆತ್ಮೀಯತೆ ಮೂಡಲಿಲ್ಲ. ಆದರೆ ಹಿಂದಿಯಲ್ಲಿ ಸಂಭಾಷಣೆ ಆರಂಭಿಸಿದಾಗ ಆತ್ಮೀಯ ಭಾವ ಬೆಳೆಯಿತು. ಭಾಷೆಯೇ ಜನರ ನಡುವಿನ ಸಂಬಂಧ ಮತ್ತು ಬಾಂಧವ್ಯ ಬೆಸೆಯುವ ಸೇತುವೆ ಎಂದು ಹೇಳಿದರು.

ಮಾತೃಭಾಷೆ ಎಲ್ಲ ಸಮುದಾಯಗಳ ಆತ್ಮ. ಅದರ ಸಂರಕ್ಷಣೆ ಮತ್ತು ಬೆಳವಣಿಗೆಯಿಂದ ಸಮುದಾಯದ ಅಸ್ಮಿತೆ, ಸಾಂಸ್ಕೃತಿಕ ಪರಂಪರೆ ಹಾಗೂ ಜೀವನಮೌಲ್ಯ ಉಳಿಸಿಕೊಳ್ಳಲು ಸಾಧ್ಯ. ಭಾರತ ಭಾಷೆಗಳ ದೇಶ. ಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ಸಮುದಾಯದ ಆತ್ಮ ಮತ್ತು ಗುರುತಿನ ಸಂಕೇತ. ಭಾಷೆಯ ಮೂಲಕ ಜನರು ಪರಸ್ಪರರನ್ನು ಗುರುತಿಸಿಕೊಳ್ಳುವುದರ ಜತೆಗೆ ಭಾವನೆಗಳನ್ನು ಹಂಚಿಕೊಂಡು ಆತ್ಮೀಯ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಸಮುದಾಯದ ಭಾಷೆಯ ಆತ್ಮವನ್ನು ಜೀವಂತವಾಗಿಡಲು ಮಂತ್ರ, ಹಾಡುಗಳು, ಕಥೆಗಳು, ಕಲೆಗಳು, ಸಂಪ್ರದಾಯಗಳು, ಆಚರಣೆಗಳು ಹಾಗೂ ಹಬ್ಬಗಳ ಮೂಲಕ ನಿರಂತರ ಪ್ರಯತ್ನ ಅಗತ್ಯ ಎಂದು ತಿಳಿಸಿದರು.

ನಿಖರ ಅಧ್ಯಯನ ನಡೆಸಲು ಸಾಧ್ಯ

ಜನಜಾತೀಯ ಭಾಷೆಗಳ ಕುರಿತು ಸಮಗ್ರ ಸಂಶೋಧನೆ ನಡೆಸಲು ಮೊದಲು ಆ ಭಾಷೆಗಳನ್ನು ಮಾತನಾಡುವ ಜನರ ಜೀವನ, ಸಂಸ್ಕೃತಿ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ದಾಖಲೆಗಳು ಹಾಗೂ ಅಂಕಿ ಅಂಶಗಳನ್ನು ಸಂಗ್ರಹಿಸುವುದರಿಂದ ನೈಜ ಸಂಶೋಧನೆ ಸಾಧ್ಯವಿಲ್ಲ. ಭಾಷೆಯ ಹಿನ್ನೆಲೆ, ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಅರಿತುಕೊಂಡಾಗ ಮಾತ್ರ ಅಧಿಕೃತ ಹಾಗೂ ನಿಖರ ಅಧ್ಯಯನ ನಡೆಸಲು ಸಾಧ್ಯ ಎಂದು ಡಾ.ದಮಯಂತಿ ಅಭಿಪ್ರಾಯಪಟ್ಟರು.

ಜಗತ್ತನ್ನು ಅರಿಯುವ ಶಕ್ತಿ ನೀಡುವ ಭಾಷೆ

ಸಂತಾಲಿ ಭಾಷೆಯ ಎರಡು ಸಾಲುಗಳನ್ನು ಉಲ್ಲೇಖಿಸಿದ ಅವರು, ತಾಯಿ ಎಷ್ಟೇ ಬಡವಳಾಗಿದ್ದರೂ ಮಕ್ಕಳನ್ನು ಪ್ರೀತಿಯಿಂದ ಬೆಳೆಸುವಂತೆ, ಯಾವುದೇ ಭಾಷೆ ವ್ಯಾಪ್ತಿ ಚಿಕ್ಕದಾಗಿದ್ದರೂ ಅದು ತನ್ನ ಸಮುದಾಯಕ್ಕೆ ಗುರುತು, ಅಸ್ಮಿತೆ ಹಾಗೂ ಜಗತ್ತನ್ನು ಅರಿಯುವ ಶಕ್ತಿ ನೀಡುತ್ತದೆ ಎಂದು ವಿವರಿಸಿದರು.ಪ್ರತಿಯೊಬ್ಬರೂ ತಮ್ಮ ಮಾತೃಭಾಷೆ, ಅದರ ಲಿಪಿ ಹಾಗೂ ಸಾಹಿತ್ಯವನ್ನು ಪ್ರೀತಿಸಿ ಬೆಳೆಸಬೇಕು. ಜನಜಾತೀಯ ಭಾಷೆಗಳನ್ನು ಕಲಿಯಲು, ಅರ್ಥಮಾಡಿಕೊಳ್ಳಲು ಮತ್ತು ಸಂರಕ್ಷಿಸಲು ಎಲ್ಲರೂ ಕೈಜೋಡಿಸಬೇಕು. ಇದರಿಂದ ಭಾಷೆಗಳ ಸಮಗ್ರ ದಾಖಲೀಕರಣ, ಸಂರಕ್ಷಣೆ ಹಾಗೂ ಅಧಿಕೃತ ಸಂಶೋಧನೆಗೆ ನೆರವಾಗಲಿದೆ ಎಂದು ಡಾ. ದಮಯಂತಿ ತಿಳಿಸಿದರು.

ಜನರನ್ನು ಒಗ್ಗೂಡಿಸುವ ಆಶಯ : ಜಾರ್ಖಂಡ್‌ನ ಹಜಾರಿಬಾಗ್ ವಿನೋಬಾ ಭಾವೆ ವಿವಿ ಕುಲಪತಿ ಪ್ರೊ.ಚಂದ್ರ ಭೂಷಣ್ ಶರ್ಮಾ ಮಾತನಾಡಿ, ಬಿರ್ಸಾ ಮುಂಡಾ ಅವರು ಭಾಷೆ, ಧರ್ಮ, ಭೂಮಿ ಹಾಗೂ ಅಸ್ಮಿತೆಯ ರಕ್ಷಣೆಗಾಗಿ ಹೋರಾಡಿದ ಮಹಾನ್ ನಾಯಕ. ಅವರ ಹೋರಾಟ ಯಾವುದೇ ಒಂದು ಸಮುದಾಯದ ವಿರುದ್ಧವಾಗಿರದೆ, ಜಾರ್ಖಂಡ್‌ನ ಎಲ್ಲ ಸಮುದಾಯಗಳ ಜನರನ್ನೂ ಒಗ್ಗೂಡಿಸುವ ಆಶಯ ಹೊಂದಿತ್ತು ಎಂದರು. ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಬಸವರಾಜ ಕೋಡಗುಂಟಿ, ಉಪನ್ಯಾಸಕ ಡಾ.ಅಲೀಂದ್ರ ಬ್ರಹ್ಮ, ಕಾರ್ಯಕ್ರಮ ಸಂಯೋಜಕ ಡಾ.ಸುಜೋಯ್ ಸರ್ಕಾರ್ ಇದ್ದರು.