ವಯನಾಡು ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣದಲ್ಲಿ ಕ್ಷೀಣಗೊಂಡಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹರಿದುಬರುವ ನೀರಿನ ಒಳಹರಿವು ಕಡಿಮೆಯಾಗಿದೆ.
ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಒಳಹರಿವು ಹೆಚ್ಚಿದ್ದರೂ, ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದು ಜಲಾಶಯದ ಒಳಹರಿವಿನ ಮೇಲೂ ಪರಿಣಾಮ ಬೀರಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 2,282.36 ಅಡಿ ಇದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 2,281.72 ಅಡಿಯಷ್ಟಿತ್ತು.
ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಇದ್ದು, ಪ್ರಸ್ತುತ 18.46 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 18.07 ಟಿಎಂಸಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ಜಲಾಶಯಕ್ಕೆ 8,448 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 2,885 ಕ್ಯೂಸೆಕ್ ಒಳಹರಿವು ಇತ್ತು. ಜಲಾಶಯದಿಂದ ನದಿಗೆ 10,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಾಲುವೆಗಳಿಗೆ ಯಾವುದೇ ನೀರು ಹರಿಸಲಾಗುತ್ತಿಲ್ಲ.