ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ರೈತರ ಸಭೆ ಆಯೋಜಿಸಲಾಗಿತ್ತು. ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಪಿ. ಸೋಮಶೇಖರ್, ಕಿರಗಸೂರು ಶಂಕರ್, ವರಕೋಡು ನಾಗೇಶ್, ಪೈಲ್ವಾನ್ ವೆಂಕಟೇಶ್ ಇತರರು ಇದ್ದರು. 
ಮೈಸೂರು

ಬಿತ್ತನೆ ಬೀಜ, ಗೊಬ್ಬರ ಬೆಲೆ ಏರಿಕೆ ಸರಿಯಲ್ಲ: ಕುರುಬೂರು ಶಾಂತಕುಮಾರ್ ಬೇಸರ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಮರೆಮಾಚಿ ಬೆಲೆ ಏರಿಕೆ ಮಾಡುತ್ತದೆ
  • ಕೃಷಿ ಉತ್ಪಾದನಾ ವೆಚ್ಚ ಏರಿಕೆಯಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ
ಮೈಸೂರು:ಮುಂಗಾರು ಆರಂಭಗೊಳ್ಳುತ್ತಿದ್ದು, ಈ ಸಮಯದಲ್ಲಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಬೆಲೆ ಏರಿಕೆ ಸರಿಯಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರವನ್ನು ಹೇಳಿದರು.
ನಗರದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾ ರೈತರ ಸಮಸ್ಯೆಗಳ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಆರಂಭವಾಗಿದ್ದು, ರೈತರಿಗೆ ಬೇಕಾದ ಬಿತ್ತನೆ ಬೀಜ. ಯೂರಿಯಾ, ಡಿಎಪಿ ಸೇರಿದಂತೆ ರಾಸಾಯನಿಕ ಗೊಬ್ಬರದ ಬೆಲೆಯನ್ನು ಏರಿಕೆ ಮಾಡಿರುವುದು ಸರಿಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಮರೆಮಾಚಿ ಬೆಲೆ ಏರಿಕೆ ಮಾಡುತ್ತದೆ ಎಂದು ದೂರಿದರು.
ಯುದ್ಧದ ನೆಪದಲ್ಲಿ ಪೆಟ್ರೋಲ್, ಡೀಸೆಲ್ ದರ ಪದೇ ಪದೆ ಏರಿಕೆ ಮಾಡುವುದು ಸರಿಯಲ್ಲ. ಇದು ರೈತರ ಕೃಷಿ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಹಾಗೂ ಡೀಸೆಲ್ ದರ ಏರಿಕೆಯಿಂದ ಕೃಷಿ ಉತ್ಪಾದನಾ ವೆಚ್ಚ ಏರಿಕೆಯಾಗಲಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದರು.
ಕೃಷಿ ಕಷ್ಟಕರ, ಬೆಂಬಲ ಬೆಲೆ ದೊರೆಯದ ಈ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರದ ಬೆಲೆ ಏರಿಕೆ ಮಾಡುವುದು ಸರಿಯಲ್ಲ, ತಕ್ಷಣವೇ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಬೀದಿಗಿಲಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕಬ್ಬು ಬೆಳೆಯಲ್ಲಿ ಖರ್ಚು ಕಡಿಮೆ ಮಾಡಿ ಹೆಚ್ಚು ಉತ್ಪಾದನೆ ಮಾಡುವ ಸಾಮರ್ಥ್ಯ ಇರುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಲ್ಲಿ ಅಳವಡಿಕೆ ಮಾಡಿ ಹೆಚ್ಚು ಲಾಭಾಂಶಗಳಿಸುತ್ತಿವೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಎಐ ತಂತ್ರಜ್ಞಾನ ಜಾರಿಗೆ ತರಬೇಕು. ಈ ಬಗ್ಗೆ ಮುಖ್ಯಮಂತ್ರಿ, ಕೃಷಿ ಸಚಿವರು, ಸಕ್ಕರೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಹೇಳಿದರು.
ಈಗ ಮೈಸೂರು ನಗರದಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಂಕ್ರಿಟ್ ರಸ್ತೆಯಿಂದ ಉಷ್ಣಾಂಶ ಏರಿಕೆಯಾಗಿ ಪರಿಸರಕ್ಕೆ ಧಕ್ಕೆಯಾಗುತ್ತದೆ. ಸಿಮೆಂಟ್ ಉತ್ಪಾದಕ ಕಂಪನಿಗಳ ಒತ್ತಡಕ್ಕೆ ಮಣಿದು ಎಲ್ಲೆಡೆ ಈ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಪರಿಸರಕ್ಕೆ ಧಕ್ಕೆಯಾಗುವ ಇಂತಹ ಕಾಮಗಾರಿ ಬಿಟ್ಟು, ವ್ಯವಸ್ಥಿತ ಡಾಂಬರು ರಸ್ತೆ ನಿರ್ಮಾಣ ಮಾಡುವುದೇ ಒಳ್ಳೆಯದು ಎಂದು ಒತ್ತಾಯಿಸಿದರು.
ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ನೀಡುತ್ತಿರುವ ವಿದ್ಯುತ್ ಸಂಪರ್ಕವನ್ನು ನಿಲ್ಲಿಸಲು ಹುನ್ನಾರ ನಡೆಯುತ್ತದೆ. ಇದಕ್ಕಾಗಿ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗಿಯವರಿಗೆ ವಹಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ರೈತ ವಿರೋಧಿಯಾಗಿ ಖಾಸಗಿ ಕರಣ ಮಾಡಲು ಕರೆದಿರುವ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಪಿ. ಸೋಮಶೇಖರ್, ಕಿರಗಸೂರು ಶಂಕರ್, ವರಕೋಡು ನಾಗೇಶ್, ಪೈಲ್ವಾನ್ ವೆಂಕಟೇಶ್, ಸಿದ್ದೇಶ್, ವಿಜಯೇಂದ್ರ,ಮೂಕಹಳ್ಳಿ ಮಹದೇವಸ್ವಾಮಿ, ನೀಲಕಂಠಪ್ಪ, ವರಕೋಡು ನಾಗೇಶ್, ಪಟೇಲ್ ಶಿವಮೂರ್ತಿ, ಸತೀಶ್, ಉಡಿಗಾಲ ರೇವಣ್ಣ, ಸುಂದರಪ್ಪ, ಕೆಂಡಗಣಪ್ಪ, ಪ್ರಸಾದ್ ನಾಯಕ, ಕಾಟೂರು ಮಹದೇವಸ್ವಾಮಿ, ಬಸವರಾಜ, ಪರಶಿವಮೂರ್ತಿ, ಪ್ರದೀಪ್, ಮಂಜುನಾಥ್, ಗೌರಿಶಂಕರ್ ಇತರರು ಇದ್ದರು.