ಸುಯೋಗ್ ಆಸ್ಪತ್ರೆ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಪ್ರೊ.ಕೆ.ಭೈರವಮೂರ್ತಿ ಭಾವಚಿತ್ರಕ್ಕೆ ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಪುಷ್ಪನಮನ ಸಲ್ಲಿಸಿದರು.ಮಡ್ಡಿಕೆರೆ ಗೋಪಾಲ್, ಡಾ.ಎಸ್.ಪಿ.ಯೋಗಣ್ಣ, ಮ.ನ.ಲತಾ ಮೋಹನ್, ಎನ್.ಅನಂತ ಇನ್ನಿತರರಿದ್ದರು
- ಹಿರಿಯ ವಿದ್ವಾಂಸ ಪ್ರೊ.ಕೆ.ಭೈರವಮೂರ್ತಿ ಬದುಕು ಬರಹ- ಒಂದು ಅವಲೋಕನ ಕಾರ್ಯಕ್ರಮ
ಮೈಸೂರು: ಸಂಘ ಜೀವಿಯಾಗಿ ಬದುಕಿ ಆದರ್ಶವನ್ನು ಬಳುವಳಿಯಾಗಿ ನೀಡಿದ ಸರಳ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸ್ಮರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಚಿಗುರು ಸಾಹಿತ್ಯ ಬಳಗದ ಸಹಯೋಗದಲ್ಲಿ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಸಭಾಂಗಣದಲ್ಲಿ ತ.ಸು.ಶಾಮರಾವ್ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ಹಿರಿಯ ವಿದ್ವಾಂಸ ಪ್ರೊ.ಕೆ.ಭೈರವಮೂರ್ತಿ ಬದುಕು ಬರಹ- ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೃಜನಶೀಲ ಸಾಹಿತಿಗಳಲ್ಲಿ ಒಬ್ಬರಾದ ಡಾ.ಭೈರವಮೂರ್ತಿ ಅವರು, ಸಾಧು ಸ್ವಭಾವ, ಸರಳ ಸಜ್ಜನಿಕೆಯ ಮೂರ್ತಿಯಾಗಿದ್ದರು. ಆಳವಾದ ಅಧ್ಯಯನ ಮಾಡುತ್ತಿದ್ದರಲ್ಲದೆ, ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರೊಂದಿಗೆ ವೈಯಕ್ತಿಕವಾಗಿ ಒಡನಾಟ ಇದ್ದು, ಪರಸ್ಪರ ಚರ್ಚಿಸುತ್ತಿದ್ದೆವು ಎಂದು ಸ್ಮರಿಸಿದರು.
ಹಿರಿಯ ವಿದ್ವಾಂಸ ಪ್ರೊ.ಕೆ.ಭೈರವಮೂರ್ತಿ ಬದುಕು- ಬರಹ ಕುರಿತು ಹಿರಿಯ ಸಂಸ್ಕೃತ ವಿದುಷಿ ಡಾ.ಕೆ.ಲೀಲಾಪ್ರಕಾಶ್ ಮಾತನಾಡಿ, ಅಜಾತಶತ್ರು, ಉತ್ತಮ ಸಂಘಟಕ, ಸಾಹಿತ್ಯವನ್ನೇ ಉಸಿರಾಗಿಸಿಕೊಂಡವರು ಪ್ರೊ.ಭೈರವಮೂರ್ತಿ ಎಂದರು.
ಬಹುಶಃ ನಾಡಿನಲ್ಲಿಯೇ ಅತಿ ಹೆಚ್ಚು ಅಭಿನಂದನಾ ಗ್ರಂಥ ಹೊರತಂದ ಹೆಗ್ಗಳಿಕೆ ಇವರದು. ವಚನ ಸಾಹಿತ್ಯದಲ್ಲಿ ಹೆಚ್ಚಿನ ಕೃಷಿ ಮಾಡಿರುವ ಇವರು ಶಿಶು ಸಾಹಿತ್ಯದಲ್ಲೂ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಸಾಹಿತಿಯಾಗಿದ್ದ ಪ್ರೊ. ಭೈರವಮೂರ್ತಿ ಅವರು ತಮ್ಮ ಪತ್ನಿ ವಿಜಯಕುಮಾರಿ ಅವರಿಗೂ ಸಾಹಿತ್ಯದ ಅಭಿರುಚಿ ಮೂಡಿಸಿ, ಮುಂದೆ ಅವರಿಂದ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಲು ಕಾರಣಕರ್ತರಾದರು ಎಂದರು.
ಇತ್ತೀಚೆಗೆ ನಿಧನರಾದ ಸಾಹಿತಿ ಚಂಪಾ ಶಿವಣ್ಣ ಹಾಗೂ ಎಸ್.ಎಂ.ಕೃಷ್ಣ ಅಭಿಮಾನಿ ಬಳಗದ ಅಧ್ಯಕ್ಷ ವಿಕ್ರಾಂತ್ ಪಿ.ದೇವೇಗೌಡ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮ.ನ.ಲತಾ ಮೋಹನ್, ಉಪಾಧ್ಯಕ್ಷ ಎನ್.ಅನಂತ, ಚಿಗುರು ಸಾಹಿತ್ಯ ಬಳಗದ ಸಂಚಾಲಕ ಎಂ.ವಿ.ನಾಗೇಂದ್ರಬಾಬು, ಕಾರ್ಯದರ್ಶಿ ನಾಗೇಂದ್ರ ಹೆಬ್ಬಾರ್, ಹರ್ಷವರ್ಧನ ಮತ್ತಿತರರಿದ್ದರು.