ಕಿರುರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಅಗ್ನಿ ಬನ್ನಿರಾಯರ ಭಾವಚಿತ್ರಕ್ಕೆ ಎಂಎಲ್‌ಸಿ ಸಿ.ಎನ್.ಮಂಜೇಗೌಡ ಪುಷ್ಪ ನಮನ ಸಲ್ಲಿಸಿದರು. ಡಾ.ಎಚ್.ಎನ್.ರಮೇಶ್, ಶಿವಣ್ಣ, ಶಾಂತೇಗೌಡ, ರಾಮೇಗೌಡ, ಹುಚ್ಚೇಗೌಡ, ವೆಂಕಟೇಶ್ ಇದ್ದರು
- ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅಭಿಮತ
- ಅಗ್ನಿ ಬನ್ನಿರಾಯ ಜಯಂತಿ
ಮೈಸೂರು: ಸಮಾಜದ ನೈತಿಕ ಬೆಳವಣಿಗೆಗೆ ಮಹನೀಯರ ಆದರ್ಶಗಳೇ ದಾರಿ ದೀಪ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶ್ರೀ ಅಗ್ನಿ ಬನ್ನಿರಾಯ ಜಯಂತ್ಯುತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಗರದ ಕಿರುರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಗ್ನಿ ಬನ್ನಿ ದೇವರಾಯರು ಕ್ಷತ್ರಿಯರ ಆರಾಧ್ಯದೈವ ಮಾತ್ರವಲ್ಲದೆ, ಶ್ರಮಜೀವಿಗಳ ಸಂಕೇತವೂ ಹೌದು. ಜೀವನದಲ್ಲಿ ಯಶಸ್ವಿಯಾಗಲು ಶ್ರಮ ಅತಿ ಮುಖ್ಯ. ಒಬ್ಬ ವ್ಯಕ್ತಿ ತನ್ನ ಪರಿಶ್ರಮದ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಅಗ್ನಿ ಬನ್ನಿ ದೇವರಾಯರ ಜೀವನವೇ ಸಾಕ್ಷಿ. ಅವರ ಆದರ್ಶ ಹಾಗೂ ಅವರು ತೋರಿದ ಮಾರ್ಗವನ್ನು ನಾವು ಪಾಲಿಸದಿದ್ದರೆ ನಮ್ಮ ಜೀವನ ಅಸ್ತವ್ಯಸ್ತವಾಗುತ್ತದೆ ಎಂದರು.
ಮಹನೀಯರ ಆದರ್ಶ, ಅವರು ನಡೆದ ಬಂದ ಹಾದಿ, ವಚನಗಳು ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಬೇಕು. ಪ್ರಸ್ತುತ ಪೀಳಿಗೆಗೆ ಇವರನ್ನು ಪರಿಚಯಿಸುವ ಉದ್ದೇಶದಿಂದ ಇಂತಹ ಜಯಂತಿ ಆಚರಿಸುತ್ತಿದೆ ಎಂದರು.
ದ್ರಾವಿಡ ಸಂಸ್ಕೃತಿಯ ಪ್ರತೀಕ:
ಮೈಸೂರು ವಿವಿ ವಿಶ್ವವಿದ್ಯಾಲಯ ಸಂಜೆ ಕಾಲೇಜಿನ ಅಧ್ಯಾಪಕ ಡಾ.ಎಚ್.ಎನ್.ರಮೇಶ್ ಮಾತನಾಡಿ, ಅಗ್ನಿಬನ್ನಿರಾಯರು ತಿಗಳ ಜನಾಂಗಕ್ಕೆ ಸೇರಿದವರು. ತಿಗಳ ಜನಾಂಗವು ದ್ರಾವಿಡ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಂದ ಸಮುದಾಯವಾಗಿದೆ. ’ತಿಗಳ’ ಎಂಬುದು ಅಗ್ನಿಯ ಸಂಕೇತವಾಗಿದೆ ಎಂದು ವಿವರಿಸಿದರು.
ಕರ್ನಾಟಕ ಅಗ್ನಿವಂಶ ಕ್ಷತ್ರಿಯರು ಮತ್ತು ಭಾರತದ ತಿಗಳ ಕ್ಷತ್ರಿಯ ವಂಶ ಎಂಬ ಪುಸ್ತಕಗಳಲ್ಲಿ ಈ ಸಮುದಾಯಕ್ಕೆ ಸೇರಿದ ರಾಜಮನೆತನಗಳ ಇತಿಹಾಸವಿದೆ. ಶಿಲಾಯುಗದಿಂದಲೂ ಈ ಸಂಸ್ಕೃತಿಯ ಬೇರುಗಳನ್ನು ಗುರುತಿಸಬಹುದು. ಕರ್ನಾಟಕದ ಸುಮಾರು 30 ಸಾವಿರಕ್ಕೂ ಹೆಚ್ಚು ಶಾಸನಗಳಲ್ಲಿ ಕೆಲವು ಶಾಸನಗಳು ತಿಗಳ ಸಮುದಾಯದ ಕುರಿತು ಮಾಹಿತಿ ನೀಡುತ್ತವೆ ಎಂದು ಹೇಳಿದರು.
ಸಮಿತಿಯ ಪದಾಧಿಕಾರಿಗಳಾದ ಶಿವಣ್ಣ, ಶಾಂತೇಗೌಡ, ರಾಮೇಗೌಡ, ಹುಚ್ಚೇಗೌಡ, ವೆಂಕಟೇಶ್, ಲತಾ ರಂಗಸ್ವಾಮಿ, ವೀಣಾ ಸಿದ್ದೇಶ್, ಮಲ್ಲೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ. ಡಿ. ಸುದರ್ಶನ್ ಉಪಸ್ಥಿತರಿದ್ದರು.