ಮೈಸೂರು: ಮೈಸೂರು ನಗರದಲ್ಲಿರುವ ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ಉದಯರವಿ ನಿವಾಸವನ್ನು ಸ್ಮಾರಕ ಮತ್ತು ಮ್ಯೂಸಿಯಂ ಆಗಿ ಅಭಿವೃದ್ಧಿಪಡಿಸುವ ಚಿಂತನೆಯಿದೆ ಎಂದು ಸರ್ಕಾರ ತಿಳಿಸಿದೆ.
ವಿಧಾನಸಭಾ ವಿಶೇಷ ಅಧಿವೇಶನದ ಗಮನ ಸೆಳೆಯುವ ಸೂಚನೆಯಲ್ಲಿ ಶಾಸಕ ಕೆ.ಹರೀಶ್‌ಗೌಡ ಅವರ ಕೇಳಿದ ಪ್ರಶ್ನೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಬೈರತಿ ಸುರೇಶ್, ಸ್ಮಾರಕವಾಗಿ ಅಭಿವೃದ್ಧಿಪಡಿಸಲು ಕುವೆಂಪು ಅವರ ಕುಟುಂಬ ಸದಸ್ಯರ ಜತೆ ಮಾತನಾಡಲಾಗುತ್ತಿದೆ ಎಂದು ತಿಳಿಸಿದರು.
ಕುವೆಂಪು ಅವರ ಮಗಳು ತಾರಣಿ, ಅಳಿಯ ಡಾ.ಚಿದಾನಂದಗೌಡ ಅವರ ಜತೆ ಮಾತನಾಡಿದ್ದು, ಅವರ ಕೆಲವು ಷರತ್ತುಗಳ ಬಗ್ಗೆ ಸಿಎಂ ಜತೆ ಮಾತನಾಡಬೇಕಿದೆ ಎಂದರು.
ಬಜೆಟ್‌ನಲ್ಲಿ ಘೋಷಿಸಿ ಆರು ವರ್ಷಗಳಾಗಿದೆ, ಮುಂದಿನ ಪೀಳಿಗೆಗೆ ಕುವೆಂಪು ಅವರ ಬಗ್ಗೆ ಪರಿಚಯಿಸಲು ಅವರು 50 ವರ್ಷ ವಾಸವಿದ್ದ ಮನೆಯನ್ನು ಸ್ಮಾರಕ ಹಾಗೂ ಮ್ಯೂಸಿಯಂ ಮಾಡುವುದು ಅಗತ್ಯವಿದೆ ಎಂದು ಕೆ.ಹರೀಶ್ ಗೌಡ ಮನವಿ ಮಾಡಿದರು.
ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ನಗರದ ವಿವಿ ಪುರಂನಲ್ಲಿರುವ ಕುವೆಂಪು ಅವರ ನಿವಾಸ ಉದಯರವಿಗೆ ಭೇಟಿ ನೀಡಿ ವೀಕ್ಷಿಸಿದರು. ಅವರು ಬಳಕೆ ಮಾಡುತ್ತಿದ್ದ ವಸ್ತುಗಳು, ಅಧ್ಯಯನ ಮಾಡುತ್ತಿದ್ದ ಕೊಠಡಿ, ಪೂಜಾ ಕೊಠಡಿ, ಊಟದ ಹಾಲ್ ಎಲ್ಲವನ್ನೂ ವೀಕ್ಷಿಸಿದ ಬಳಿಕ ಕುವೆಂಪು ಕುಟುಂಬ ಸದಸ್ಯರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಜತೆಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಆದಷ್ಟು ಬೇಗ ಸ್ಮಾರಕ ಮಾಡುವುದಾಗಿಯೂ ತಿಳಿಸಿದ್ದರು.