ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವದ ಮೆರವಣಿಗೆಗೆ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಎಂ.ಡಿ.ಬಸವರಾಜು, ಮಂಜುನಾಥನ್, ಕೆ.ಸಿ.ಲೋಕೇಶ್, ಗೋವಿಂದರಾಜು, ಪ್ರಕಾಶ್, ಸಿದ್ದರಾಜು ಇತರರು ಇದ್ದರು. ತಿ.ನರಸೀಪುರ
ಮೈಸೂರು

ಮಹಾಕಾವ್ಯದಲ್ಲಿ ಪ್ರಜಾತಂತ್ರದ ಆಶಯ ಮಿಳಿತ

ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯ

ತಿ.ನರಸೀಪುರ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಆದರ್ಶ ಬದುಕಿನ ಸಂದೇಶಗಳು ಅಡಕವಾಗಿವೆ ಎಂದು ಶಾಸಕ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ನಾಯಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ಭಾರತೀಯ ಸಾಹಿತ್ಯ ಪರಂಪರೆಗೆ ಮಹತ್ವದ ಕೊಡುಗೆ ನೀಡಿವೆ. ಜತೆಗೆ ಭಾರತೀಯ ಸಂಸ್ಕೃತಿ, ಸಾಹಿತ್ಯ ಪರಂಪರೆ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಗೆ ಭದ್ರ ಬುನಾದಿ ಹಾಕಿದ ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಶ್ರೀರಾಮ, ಸೀತಾದೇವಿ, ಲಕ್ಷ್ಮಣ ಹಾಗೂ ಇನ್ನಿತರರನ್ನು ಪರಿಚಯಿಸಿದರು. ರಾಮಾಯಣವು ವಿವಿಧ ಆಯಾಮಗಳನ್ನು ತೆರೆದಿಡುವ ಮಹಾಕಾವ್ಯವಾಗಿದ್ದು, ಅದರಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನೂ ಕಾಣಬಹುದು ಎಂದು ಹೇಳಿದರು.

ಸ್ತಬ್ಧಚಿತ್ರಗಳ ಮೆರವಣಿಗೆ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಜರುಗಿದ ಮೆರವಣಿಗೆ ಜನರ ಗಮನ ಸೆಳೆಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನಾಯಕ ಸಮುದಾಯದವರ ಸ್ತಬ್ಧಚಿತ್ರಗಳು ಆಕರ್ಷಕವಾಗಿದ್ದವು. ಅಲ್ಲದೆ ಪಲ್ಲಕ್ಕಿ, ನಗಾರಿ, ಗಾರುಡಿಗೊಂಬೆ ಹಾಗೂ ವೀರಗಾಸೆ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಮನವಿ ಸಲ್ಲಿಕೆ: ಪಟ್ಟಣದ ಪುರಸಭೆ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಸ್ಥಾಪಿಸಬೇಕು ಹಾಗೂ ರಸ್ತೆಗೆ ವಾಲ್ಮೀಕಿ ಹೆಸರು ನಾಮಕರಣ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ತಾಲೂಕು ನಾಯಕರ ಸಂಘರ ಪದಾಧಿಕಾರಿಗಳು ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ನಾಯಕರ ಸಂಘದ ಗೌರವಾಧ್ಯಕ್ಷ ಟಿ.ಎಚ್.ಮಂಜುನಾಥನ್, ಅಧ್ಯಕ್ಷ ಎಂ.ಡಿ.ಬಸವರಾಜು, ಉಪಾಧ್ಯಕ್ಷ ಹೆಮ್ಮಿಗೆ ಹೊನ್ನನಾಯಕ, ಕಾರ್ಯದರ್ಶಿ ಆಲಗೂಡು ನಾಗರಾಜು, ಖಜಾಂಚಿ ಗೋವಿಂದರಾಜು, ಜಿಪಂ ಮಾಜಿ ಸದಸ್ಯರಾದ ಹೊನ್ನನಾಯಕ, ಕೆ.ಸಿ.ಲೋಕೇಶ್, ಸುಧಾಮಣಿ, ರೇಣುಕಾ ನಾಗರಾಜು, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಇಒ ಡಾ.ಕೆ.ರಂಗಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಕೋಮಲಾ, ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ, ಪಿಎಸ್‌ಐ ಮಲ್ಲೇಶಯ್ಯ, ಮುಖಂಡರಾದ ಬೂದಹಳ್ಳಿ ಸಿದ್ದರಾಜು, ಮಂಡಿ ಪ್ರಕಾಶ್, ಡಣಾಯಕನಪುರ ಸೋಮಣ್ಣ ನಾಯಕ, ಕೆ.ಎನ್.ಕುಮಾರ್, ಸುಂದರ ನಾಯಕ, ಎಂ.ಬಿ.ಸಾಗರ್, ಹೆಮ್ಮಿಗೆ ಸೋಮಣ್ಣ, ಎಸ್.ರಾಜೇಶ್ ಇತರರು ಇದ್ದರು.