ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಸಮ್ಮೇಳನವನ್ನು ಸಿ.ಬಸವಲಿಂಗಯ್ಯ ಉದ್ಘಾಟಿಸಿದರು. ಎಸ್.ಧನರಾಜು, ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಪ್ರೊ.ಸಾರಾ ಮೋಷರ್, ರಾಜೇಶ್ ಎಚ್.ತಲಕಾಡು, ಪ್ರೊ.ಎಂ.ಜಿ.ಮಂಜುನಾಥ್ ಇತರರು ಇದ್ದರು.
- ಪ್ರದರ್ಶಕ ಕಲೆಗಳು ಬಹುತ್ವ ಭಾರತದ ಹೆಗ್ಗುರುತುಗಳಾಗಿವೆ
- ಎಲ್ಲ ಸಮಯದಲ್ಲೂ ಬೆಳಕನ್ನೇ ಶ್ರೇಷ್ಠವಾಗಿ ಕಾಣಲು ಸಾಧ್ಯವಿಲ್ಲ
ಮೈಸೂರು: ದೇಶದಲ್ಲಿ ಹಲವು ಭಾಷೆ, ಕಲೆಗಳಿದ್ದು, ನಮ್ಮ ಸಂಸ್ಕೃತಿ ಅವುಗಳನ್ನೇಲ್ಲಾ ಮಿಶ್ರಣ ಮಾಡಿ ಹಿರಿಮೆಯನ್ನು ಹೆಚ್ಚಿಸಿದೆ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ರಂಗಭೂಮಿ ಮತ್ತು ಪ್ರದರ್ಶಕ ಕಲೆಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಸಮಯದಲ್ಲೂ ಬೆಳಕನ್ನೇ ಶ್ರೇಷ್ಠವಾಗಿ ಕಾಣಲು ಸಾಧ್ಯವಿಲ್ಲ. ಬೆಳಕು ಸಮಾಜದಲ್ಲಿನ ಅಸಮಾನತೆ ತೋರುತ್ತದೆ. ಕತ್ತಲು ಎಲ್ಲವನ್ನೂ ಒಗ್ಗೂಡಿಸುತ್ತದೆ ಎಂಬ ಚಿಂತನೆಯೂ ಅಗತ್ಯ. ರಂಗಭೂಮಿ ಅಥವಾ ಕಲಾ ಕ್ಷೇತ್ರವು ಇಂತಹ ಆಲೋಚನೆಗೆ ಪ್ರೇರೇಪಿಸುತ್ತದೆ ಎಂದರು
ಪ್ರದರ್ಶಕ ಕಲೆಗಳು ಬಹುತ್ವ ಭಾರತದ ಹೆಗ್ಗುರುತುಗಳಾಗಿವೆ. ದೇಶದಲ್ಲಿ ಹಲವು ಭಾಷೆ, ಪ್ರದರ್ಶಕ ಕಲೆಗಳಿವೆ. ನಮ್ಮ ಸಂಸ್ಕೃತಿಯ ಹಿರಿಮೆಯೇ ಇವುಗಳ ಮಿಶ್ರಣದಲ್ಲಿದೆ. ಆದ್ದರಿಂದ ಕಲೆಗಳಲ್ಲಿ ಬೇಧವಿಲ್ಲ ಎಂದು ಹೇಳಿದರು.
ರಂಗಭೂಮಿಯಂತೂ ಧರ್ಮಾತೀತ, ಜಾತ್ಯತೀತ ಹಾಗೂ ದೇಶಾತೀತವಾಗಿದೆ. ಭಾರತೀಯ ಪ್ರಜೆಗಳಾದ ನಾವು ಎಂಬ ವಾಕ್ಯವೂ ಸಹ ಇದನ್ನೇ ಧ್ವನಿಸುತ್ತದೆ. ರಂಗಭೂಮಿಯಲ್ಲಿ ಪಾತ್ರಗಳನ್ನು ಅಭಿನಯಿಸಲಾಗುತ್ತದೆ ಹೊರತು ನಟರೇ ಪಾತ್ರಗಳಾಗುವುದಿಲ್ಲ. ಸಮಾಜವನ್ನು ಒಗ್ಗೂಡಿಸಲು ಪಾತ್ರಗಳು ಪ್ರಯತ್ನಿಸುತ್ತವೆ. ಕಲೆಯ ಪ್ರಯತ್ನವೂ ಅದೇ ಆಗಿದೆ ಎಂದರು.
ಮಧ್ಯಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಸ್.ಧನರಾಜು ಮಾತನಾಡಿ, ಕಲೆ, ಸಾಹಿತ್ಯ ನಮ್ಮನ್ನು ಒಗ್ಗೂಡಿಸುತ್ತದೆ. ಆಧುನಿಕತೆ ಸೃಷ್ಟಿಸುವ ಸಮಸ್ಯೆಗೂ ಇದು ಔಷಧ. ದೇಶದ ವೈವಿಧ್ಯತೆ ಉಳಿಸುವುದು, ಇತರರ ವೈವಿಧ್ಯತೆಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.
ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅಧ್ಯಕ್ಷತೆ ವಹಿಸಿದ್ದರು. ಅಮೆರಿಕದ ಬೇಲರ್ ವಿಶ್ವವಿದ್ಯಾಲಯದ ವಸ್ತ್ರ ವಿನ್ಯಾಸಕಾರ್ತಿ ಪ್ರೊ.ಸಾರಾ ಮೋಷರ್, ವೇದಿಕೆ ಅಧ್ಯಕ್ಷ ರಾಜೇಶ್ ಎಚ್.ತಲಕಾಡು, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್ ಇತರರು ಇದ್ದರು.